Consumed poison and digested it!

|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ - ಕಲ್ಪತರು

ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು

ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು

೧೫. ವಿಷಕುಡಿದು ಜೀರ್ಣಿಸಿಕೊಂಡರು!

ಕಯಾದುವು ಅಂತಃಪುರದಲ್ಲಿ ಚಿಂತಾಮಗ್ನಳಾಗಿದ್ದಾಳೆ, ದೈತ್ಯವಂಶದ ಹಿತವೇ ಸರ್ವಸ್ವವೆಂದು ನಂಬಿ ಅದರ ಹಿತಕ್ಕಾಗಿ ಹೊಟ್ಟೆಯಲ್ಲಿ ಹುಟ್ಟಿದ ಪುತ್ರನನ್ನೇ ದ್ವೇಷಿಸುತ್ತಾ ವಿವಿಧ ಹಿಂಸೆಗೆ ಗುರಿಪಡಿಸುತ್ತಿರುವ ತನ್ನ ಪತಿ ಒಂದು ಕಡೆ, ಶ್ರೀಹರಿಯ ಹುಚ್ಚು ಹಿಡಿದು ಅವನ ಸೇವೆ, ನಾಮಸ್ಮರಣೆ ಭಕ್ತಿಗಳೇ ತನ್ನ ಸರ್ವಸ್ವವೆಂದು ನಂಬಿ ತಂದೆಯ, ಹಿರಿಯರ ಮಾತಿಗೆ ಬೆಲೆಕೊಡದೆ ತಾನು ನಂಬಿರುವ ಹರಿಯೇ ಸರ್ವೋತ್ತಮ, ಅವನಿಂದಲೇ ಜಗತ್ತಿನ ಸರ್ವರ ಉದ್ಧಾರ, ಕಲ್ಯಾಣವೆಂದು ತಂದೆಗೆ ವಿರುದ್ಧವಾಗಿ ವಾದಿಸುತ್ತಿರುವ ಕುಮಾರ ಪ್ರಹ್ಲಾದ ಮತ್ತೊಂದು ಕಡೆ! ಮಧ್ಯದಲ್ಲಿ ತಾನು ಅನುಭವಿಸುತ್ತಿರುವ ದುಃಖಿ ಯಾತನೆಗಳಿಂದ ಬಳಲುತ್ತಿದ್ದಾಳೆ - ಕಯಾದು, ಈ ತಂದೆ-ಮಕ್ಕಳ ವಿರೋಧ-ದ್ವಂದ್ವಗಳು ಹೇಗೆ ಪರ್ಯವಸಾನವಾಗುವುದೋ ಎಂಬ ಭಯ, ಕಾತುರ, ಚಿಂತೆಗಳಿಂದ ಮರ್ಮಾಹತಳಾಗಿದ್ದಾಳೆ, ಆ ತಾಯಿ.

“ಹಾ, ದುರ್ವಿಧಿಯೇ! ನನ್ನ ದುಃಖಕ್ಕೆ ಅಂತ್ಯವೇ ಇಲ್ಲವೇ? ಯಾವ ಜನ್ಮದ ಪಾಪದ ಫಲವಿದು ? ಜಗತ್ತಿನ ದೃಷ್ಟಿಯಲ್ಲಿ ನಾನು ಸಾಮ್ರಾಜ್ಞೆ! ನನ್ನ ಕಷ್ಟ ಯಾರಲ್ಲಿ ಹೇಳಿಕೊಳ್ಳಲಿ ? ಮನಸ್ಸಿಗೆ ಶಾಂತಿಯೇ ಇಲ್ಲದಂತಾಗಿದೆಯಲ್ಲ! ನೆನೆಯಲೂ ಹೃದಯವಿದಾರಕವಾದ ಭವಿಷ್ಯದ ದುಷ್ಟ ಕಲ್ಪನೆಗಳು ಬೆನ್ನು ಹತ್ತಿದ ಬೇತಾಳದಂತೆ ಬಾಧಿಸುತ್ತಿರುವುದು. ತಂದೆ-ಮಕ್ಕಳ ಈ ಹಗೆತನದ ಪರಿಣಾಮವೇನಾಗುವುದೋ ಕಾಣೆನೇ! ಹರಿದ್ವೇಷದಿಂದ ಇತ್ತ ಯುಕ್ತಾಯುಕ್ತ ಶಕ್ತಿಯನ್ನೇ ಕಳೆದುಕೊಂಡು ಕುಮಾರನನ್ನು ದ್ವೇಷಿಸುತ್ತಿರುವನು ನನ್ನ ಸ್ವಾಮಿ. ಅತ್ತ ಮುದ್ದು ಕಂದಮ್ಮ ಪ್ರಹ್ಲಾದನು ನಾರಾಯಣನೇ ಸರ್ವಸ್ವವೆಂದು ಬಗೆದು ನನ್ನ ಹಿತವಚನವನ್ನೂ ಗಮನಿಸದೆ ಹರಿಯ ಆರಾಧನೆಯಲ್ಲಿ ಮಗ್ನನಾಗಿದ್ದಾನೆ. ಅಬಲೆಯಾದ ನಾನು ಈ ಉಭಯರ ಮಧ್ಯದಲ್ಲಿ ಸಿಲುಕಿ ಸಂಕಟದಿಂದ ಬಳಲುತ್ತಿರುವೆನು. ನಾನೀಗ ಯಾರಿಗೆ ಮೊರೆಹೋಗಲಿ?” ಎಂದು ದುಃಖಿಸಹತ್ತಿದಳು.

ಗುರುಪುತ್ರರ ಮಾತಿನಿಂದ ಕಂಗೆಟ್ಟ ಹಿರಣ್ಯಕಶ್ಯಪನು ಕೋಪದಿಂದ ಹುಚ್ಚನಂತಾಗಿ ಕುಮಾರ ಪ್ರಹ್ಲಾದನನ್ನು ಎಳೆದುಕೊಂಡು ಬಂದು “ದೇವಿ, ನಿನ್ನೀ ಕುಮಾರನು ಮೇರೆ ಮೀರಿದ್ದಾನೆ. ನನ್ನ ಸಹನೆಗೂ ಒಂದು ಮಿತಿಯಿದೆ. ಕಯಾಧು! ನಿನ್ನೀ ಪುತ್ರನನ್ನು ಸರಿಪಡಿಸದಿದ್ದರೆ.... ಮುಂದೆ ನಾನೇ ಸ್ವತಃ ಇವನನ್ನು ಶಿಕ್ಷಿಸಬೇಕಾದೀತು!” ಎಂದು ಅಬ್ಬರಿಸಿದನು.

ಕಯಾಧು : (ಪ್ರಹ್ಲಾದನನ್ನು ಅಪ್ಪಿ) ವತ್ಸ! ಪ್ರಹ್ಲಾದ, ಹೀಗೇಕೆ ಮಾಡುತ್ತಿರುವೆ ಕಂದ! ತಂದೆಯ ಮನಸ್ಸಿಗೆ ಹರ್ಷವಾಗುವಂತೆ ವರ್ತಿಸಬಾರದೆ?

ಪ್ರಹ್ಲಾದ : ತಾಯಿ, ತಂದೆಗೆ ನಾನೆಂದೂ ವಿರೋಧಿಯಲ್ಲಮ್ಮ ! ಅವರ ಹಿತಕ್ಕಾಗಿಯೇ ನಾನು ಪ್ರಯತ್ನಿಸುತ್ತಿದ್ದೇನೆ. ಹಿರಣ್ಯಕಶ್ಯಪು : (ಸಿಟ್ಟಿನಿಂದ) ಕೇಳಿದೆಯಾ ದೇವಿ! ನಿನ್ನೀ ಸುತನು ನನ್ನ ಹಿತವನ್ನು ಬಯಸುವಂತೆ! ನನ್ನ ಆಜನ್ಮ ಶತ್ರುಪಕ್ಷವನ್ನು ಅವಲಂಬಿಸಿರುವ ಈ ದುಷ್ಟನು ಇನ್ನು ಬದುಕಿರಬಾರದು!” ಹೀಗೆ ಹೇಳುತ್ತಿರುವಾಗಲೇ ದುರ್ಮುಖನು ಕಾಲಕೂಟ ಸದೃಶವಾದ ವಿಷವನ್ನು ತಂದು ಸಾಮ್ರಾಟನಿಗೆ ಅರ್ಪಿಸಿ ತೆರಳಿದನು.

ಕಯಾಧುವು ಭಯದಿಂದ “ಸ್ವಾಮಿ ಅದೇನು ?” ಎಂದು ಕೇಳಲು ಹಿರಣ್ಯಕಶ್ಯಪನು “ನಿನ್ನ ಮಗನನ್ನು ಸಂಹರಿಸಲು ಈ ವಿಷವನ್ನು ತರಿಸಿದ್ದೇನೆ! ಹೂಂ, ರಾಣಿ ಈ ವಿಷವನ್ನು ಕುಲಕಂಟಕನಾದ ನಿನ್ನ ಪುತ್ರನಿಗೆ ನಿನ್ನ ಕೈಯಿಂದಲೇ ಕುಡಿಸು” ಎಂದು ವಿಷದ ಬಟ್ಟಲನ್ನು ಕಯಾಧುವಿನ ಕೈಗೆ ಕೊಡಹೋಗಲು, ಕಯಾಧುವು ಭಯದಿಂದ ಹಿಂದೆ ಸರಿದು “ಏನು ? ಏನೆಂದಿರಿ ಸ್ವಾಮಿ, ನನ್ನ ಮುದ್ದು ಕಂದನಿಗೆ ನಾನೇ ವಿಷ ಕುಡಿಸಬೇಕೆ ? ಅಸಾಧ್ಯ! ಅದೆಂದಿಗೂ ಆಗದ ಮಾತು” ಎಂದಳು.

ಹಿರಣ್ಯನು (ಕೋಪದಿಂದ) “ಇದು ನಿನ್ನ ಪತಿಯ ಆಜ್ಞೆ! ಹೂಂ, ಪ್ರಹ್ಲಾದನಿಗೆ ವಿಷಪ್ರಾಶನ ಮಾಡಿಸು” ಎಂದು ಕಯಾಧುವನ್ನು ಬಲಾತ್ಕರಿಸುತ್ತಿರುವಾಗ ಪ್ರಹ್ಲಾದನು “ಅಮ್ಮಾ ! ನೀನೇಕೆ ಚಿಂತಿಸುವೆ? ಪತಿಯ ಆಜ್ಞೆಯನ್ನು ಪರಿಪಾಲಿಸುವುದೇ ನಿನ್ನ ಧರ್ಮ! ಹೂಂ, ಕೊಡು ತಾಯಿ ವಿಷವನ್ನು!” ಎಂದನು.

ಪ್ರಹ್ಲಾದನ ಮಾತು ಕೇಳಿ ಅಚ್ಚರಿಯಿಂದ ಮಗನ ಮುಖವನ್ನು ನೋಡಿ 'ಹೂಂ, ತೆಗೆದುಕೋ' ಎಂದು ಕಯಾಧುವಿಗೆ ವಿಷದ ಬಟ್ಟಲನ್ನು ಕೊಡಹೋಗಲು ಕಯಾಧುವು ಪತಿಯ ಪಾದವನ್ನು ಹಿಡಿದು ಕಣ್ಣೀರು ಸುರಿಸುತ್ತಾ ಬೇಡ ಬೇಡ, ನಾಥ, ನನ್ನ ಮಗನಿಗೆ ನನ್ನ ಕೈಯಿಂದಲೇ ವಿಷ ಕುಡಿಸಬೇಡಿ, ನಿಮಗೆ ಸೆರಗೊಡ್ಡಿ ಬೇಡುತ್ತೇನೆ” ಎನ್ನುತ್ತಿರುವಾಗ, ಪ್ರಹ್ಲಾದರಾಜನೇ ಪಿತನ ಕರದಿಂದ ವಿಷದ ಬಟ್ಟಲನ್ನು ತೆಗೆದುಕೊಂಡು “ಮಾತೆ, ನೀನು ಚಿಂತಿಸಬೇಡ, ಸರ್ವಶಕ್ತನಾದ ಭಗವಂತನ ದಯವಿರುವಾಗ ಈ ವಿಷವು ನನಗೇನೂ ಮಾಡಬಾರದು. ಹಿಂದೆ ಅನೇಕ ವಿಧದಿಂದ ನನ್ನನ್ನು ಕೊಲ್ಲಲು ತಂದೆಯು ಯತ್ನಿಸಿದಾಗ ನನ್ನನ್ನು ಕಾಪಾಡಿದ ಆ ಮಹಾಪ್ರಭು ಶ್ರೀಹರಿಯು ಈಗಲೂ ರಕ್ಷಿಸುವನು” ಎಂದು ಹೇಳಿ ಶ್ರೀಹರಿಯನ್ನು ಧ್ಯಾನಿಸಿ 'ಓಂ ನಮೋ ನಾರಾಯಣಾಯ' ಎಂದು ಉಚ್ಚರಿಸುತ್ತಾ ಹಾಲು ಕುಡಿದಂತೆ ವಿಷವನ್ನು ಕುಡಿದುಬಿಟ್ಟನು ಪ್ರಹ್ಲಾದರಾಜ! ಅದನ್ನು ಕಂಡು ಕಯಾದುವು ಚಿಟ್ಟನೆ ಚೀರಿ ಮೂರ್ಛಾಕ್ರಾಂತಳಾದಳು.

ಹಿರಣ್ಯಕಶ್ಯಪನು “ಇಂದಿಗೆ ನನ್ನ ಶತ್ರುವಿನ ಪಕ್ಷಪಾತಿಯಾದ ಈ ಪ್ರಹ್ಲಾದನ ಗತಿ ಮುಗಿಯಿತು” ಎಂದು ಸಂತಸದಿಂದ ಹಿಗ್ಗುತ್ತಾ ಪ್ರಹ್ಲಾದನನ್ನು ನೋಡಹತ್ತಿದನು.

ಪ್ರಹ್ಲಾದನು ಹಾಗೆಯೇ ಶ್ರೀಹರಿಧ್ಯಾನಮಗ್ನನಾಗಿ ನಿಂತಿರುವುದನ್ನು ಕಂಡು ಹಿರಣ್ಯಕಶ್ಯಪನು ಅಚ್ಚರಿಯಿಂದ ಮುಂದೆ ಬಂದು ಪ್ರಹ್ಲಾದನ ಭುಜ ಹಿಡಿದು ಅಲುಗಾಡಿಸಿದಾಗ ಪ್ರಹ್ಲಾದನು ಕಣ್ಣೆರೆದು ತಂದೆಯನ್ನು ನೋಡಿ “ಜನಕ! ನಿನಗೊಂದಿಸುವೆನು” ಎನಲು ಹಿರಣ್ಯಕಶ್ಯಪುವು ಭಯ-ವಿಸ್ಮಯಗಳಿಂದ 'ಹ್ಯಾಂ' ಎಂದು ಹಿಂಜರಿದು ಪುತ್ರನನ್ನು ನೋಡಹತ್ತಿದನು.

ಪ್ರಹ್ಲಾದ : (ಮಂದಹಾಸ ಬೀರುತ್ತಾ) ಆಹಾ, ದೇವ! ಜಗನ್ನಾಥ, ನಾರಾಯಣ, ಅಖಿಲಲೋಕಗುರೋ! ಭಕ್ತವತ್ಸಲ, ನೀನೆಂಥ ಕರುಣಾಪೂರ್ಣನು ? ನಿನ್ನೀ ಸ್ವಜನವಾತ್ಸಲ್ಯವನ್ನೆಂತು ಬಣ್ಣಿಸಲಿ ದೇವ!

ಗೋವರ್ಧನ ಗಿರಿಧಾರಿ ಮುರಾರಿ

ವಿಷಭಯಹರ ವಿಷಕಂಠವರದ ಹರಿ |

ಪೂಶರಪಿತ ಶ್ರೀರಮಣ ಸುಜನಾಧಾರಿ|| ೩ || ಎಂದು ಸ್ತುತಿಸಿದನು.

ಹಿರಣ್ಯಕಶ್ಯಪು : (ಭ್ರಾಂತನಾಗಿ ದುರುಳ! ಇನ್ನೂ ಜೀವಿಸಿರುವೆಯಾ ? ಕರಾಳ ವಿಷವೂ ನಿನಗೆ ಅಮೃತವಾಯಿತೇ ?

ಪ್ರಹ್ಲಾದ : ತಂದೆಯೇ, ಯಾರ ನಾಮಸ್ಮರಣೆಯು ಸುಜೀವಿಗಳಿಗೆ ಅಮೃತತ್ವವನ್ನು ನೀಡಲು ಸಮರ್ಥವಾಗಿದೆಯೋ ಅಂಥ ಪರಾತ್ಪರನನ್ನು ಸದಾ ಭಜಿಸುವವರಿಗೆ ಈ ವಿಷವು ಏನು ಮಾಡೀತು ? ಇದೆಲ್ಲವೂ ಶ್ರೀಹರಿಯ ಮಹಿಮೆಯೆಂದು ತಿಳಿ, ಇಷ್ಟೊಂದು ನಿದರ್ಶನಗಳಾದರೂ ಇನ್ನೂ ಆ ಭಗವಂತನ ಮಹಿಮೆಯು ನಿನಗೆ ಅರಿವಾಗಲಿಲ್ಲವೇ? ಈಗಲಾದರೂ ಆ ದಯಾಮಯನನ್ನು ದ್ವೇಷಿಸುವುದನ್ನು ಬಿಟ್ಟು, ಆ ಶ್ರೀಹರಿಯನ್ನು ಆಶ್ರಯಿಸಿ ನೀನೂ ಸುಖಿಯಾಗು!

ಹಿರಣ್ಯಕಶ್ಯಪನು ಅಸಮಾಧಾನ ಕೋಪತಾಪಗಳಿಂದ “ಹರಿ! ಹರಿ!! ಕೇಳಲಾರೆ ನನ್ನ ವೈರಿಯ ನಾಮಸ್ಮರಣೆಯನ್ನು!” ಎಂದು ಬಡಬಡಿಸಿ “ಗುರುದೇವ! ಆಚಾರ್ಯ ಶುಕ್ರರೇ! ಇನ್ನು ನೀವೇ ಗತಿ” ಎಂದು ಅಂತಃಪುರದಿಂದ ಧಾವಿಸಿದನು.