|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

೧. ವಂಶಪ್ರಶಂಸೆ

ಭಾರತದಲ್ಲಿ ಸಕಲ ವಿದ್ಯೆಗಳಿಗೆ ಷಾಷಿಕವಂಶವು ತವರುಮನೆಯೆನಿಸಿದೆ, ಈ ಷಾಷಿಕವಂಶದ (ಈ ಷಾತ್ವಿಕ ವಂಶದ ಹಿರಿಮೆ - ಗರಿಮೆಗಳನ್ನು 'ಕಲ್ಪತರು ವನ ಶ್ರೀವ್ಯಾಸರಾಜಗುರುಸಾರ್ವಭೌಮರ ಚರಿತೆಯ (ನಾಲ್ಕನೆಯ ಉಲ್ಲಾಸ) ವಿಭಾಗದಲ್ಲಿ ವಿವರವಾಗಿ ನಿರೂಪಿಸಲಾಗಿದೆ), ಗೌತಮಗೋತ್ರದ “ಬೀಗಮುದ್ರೆ” ಮನೆತನದಲ್ಲಿಯೇ ನಮ್ಮ ಕಥಾನಾಯಕರಾದ ಶ್ರೀರಾಘವೇಂದ್ರಗುರುಸಾರ್ವಭೌಮರು ಅವತರಿಸಿದರು. 

ಭಾರತಾವನಿಯಲ್ಲಿ “ಸಪ್ತರ್ಷಿ'ಗಳೆಂದು ಜಗನ್ಮಾನ್ಯರಾದ ಮಹನೀಯರಲ್ಲಿ ಗೌತಮಮಹರ್ಷಿಗಳು ಒಬ್ಬರು. ಇವರೇ ಶ್ರೇಷ್ಠವಾದ ಗೌತಮಗೋತ್ರ ಪ್ರವರ್ತಕರು. ಅವರು ಯಜ್ಞ-ಯಾಗಾದಿ ಕರ್ಮಾಚರಣರತರೂ, ಹತ್ತಾರು ಸಹಸ್ರ ಜನರಿಗೆ ಅನ್ನದಾನ ಮಾಡಿ ಸಜ್ಜನರಕ್ಷಕರಾಗಿ, ಸಕಲಮುನಿಗಳಿಗೂ ಒಡೆಯರಾಗಿ ಮತ್ತು ಶಮದಮಾದಿ ಸದ್ಗುಣಗಳಿಗೆ ಆಶ್ರಯರಾಗಿಯೂ ಕಂಗೊಳಿಸುತ್ತಿದ್ದರು. 

ಗೌತಮಮಹರ್ಷಿಗಳು ಸರ್ವೋತ್ತಮನಾದ ಶ್ರೀಮನ್ನಾರಾಯಣನಲ್ಲಿ ಪ್ರಕರ್ಷ ಭಕ್ತಿಯುಕ್ತರಾಗಿ, ಶ್ರವಣ-ಮನನ- ನಿಧಿಧ್ಯಾಸನಗಳಿಂದ, ಪ್ರಖ್ಯಾತವಾದ ಕೃಚ್ಛ, ಚಾಂದ್ರಾಯಣ ಉಪವಾಸ ಮೊದಲಾದ ವ್ರತನುಷ್ಠಾನನಿಷ್ಠರಾದ ತಾಪಸರ ಗುಂಪಿನಲ್ಲಿ ದರ್ಶಪೂರ್ಣಮಾಸಾದಿ ವಿಕೃತಿಯಾಗಗಳಿಗೆ ಸಗುಣೇಷ್ಟಿಯಂತೆ ಪ್ರಧಾನರಾಗಿದ್ದರು. ಸಗುಣೇಷ್ಟಿಯು ನಿರ್ಗುಣೇಷ್ಟಿಗೆ ಮೂಲ. ಹೋಮದ್ರವ್ಯವಿಲ್ಲದೆ ಅದರ ಸ್ಥಾನದಲ್ಲಿ ಹೆಂಟೆಕಲ್ಲುಗಳನ್ನಿಟ್ಟುಕೊಂಡು ಯಾಗಪರಿಶೀಲನೆಗಾಗಿ ಮಂತ್ರೋಚ್ಚಾರಣಪಾರ್ವಕ ಮೊದಲು ಆಚರಣೆಯ ಅಭ್ಯಾಸಮಾಡುವುದಕ್ಕೆ ನಿರ್ಗುಣೇಷ್ಟಿ ಅಥವಾ ಶುಷ್ಕಷಿ ಎಂದು ಹೆಸರು. ಸಗುಣೇಷ್ಟಿಯೆಂದರೆ - ಗುಣ, ದ್ರವ್ಯ, ಅಂಗದೇವತಾ, ಮಂತ್ರ, ಶಾಲಾ, ಸ್ಟಾಲೀ, ಸುಕ್‌ಸ್ರವಗಳು, ಋತ್ವಿಜರು, ಯಜಮಾನ, ಪಶು ಇವುಗಳಿಂದ ವಿಧಾನಪೂರ್ವಕವಾಗಿ ಮಾಡುವ ಯಾಗ. ಇಂಥ ಸಗುಣೇಷ್ಟಿಯು ನಿರ್ಗುಣೇಷ್ಟಿಗೆ ಪ್ರಧಾನವಾಗಿರುವಂತೆ ಇತರ ತಪಸ್ವಿಗಳಿಗೆ ಗೌತಮರು ಪ್ರಧಾನರಾಗಿದ್ದರು.

ಗೌತಮಮಹರ್ಷಿಗಳು ಹನ್ನೆರಡುವರ್ಷದ ಕ್ಷಾಮಕಾಲದಲ್ಲಿ ಹತ್ತುಸಾವಿರಜನ ಋಷಿಮುನಿಗಳಿಗೆ ಅನ್ನದಾನಮಾಡಿದ ಮಹನೀಯರು. ಈ ವಿಚಾರವಾಗಿ ಒಂದು ಇತಿಹಾಸವಿದೆ. ಅದನ್ನು ವಿವರಿಸುವ ಮೊದಲು ಕ್ಷಾಮದ ಕಾರಣವನ್ನು ತಿಳಿಯುವುದು ಅವಶ್ಯವಾಗಿದೆ. ಈ ಕ್ಷಾಮದ ಬಗೆಗೆ ವರಾಹಮಿಹಿರರು ಹೀಗೆ ಹೇಳಿದ್ದಾರೆ. ಯಾವಾಗ ಸೂರ್ಯಸುತನಾದ ಶನೈಶ್ಚರನು ರೋಹಿಣೀಶಕಟವನ್ನು ಭೇದಿಸಿ (ಆರು ನಕ್ಷತ್ರಗಳು ಬಂಡಿಯಾಕಾರವಾಗಿರುವುದಕ್ಕೆ ರೋಹಿಣೀ ಶಕಟವೆಂದು ಹೆಸರು) ಅಂಗಾರಕ ಮತ್ತು ಶುಕ್ರನ ಬಳಿಗೆ ಹೋಗುವನೋ ಆಗ ದೇವೇಂದ್ರನು ಹನ್ನೆರಡು ವರ್ಷಕಾಲ ಮಳೆಯನ್ನು ಸುರಿಸುವುದಿಲ್ಲ, ರೋಹಿಣಿ ಶಕಟವು ಭಿನ್ನವಾಗಲು ಭೂಮಿಯಲ್ಲಿ ಜನರು ಪಾಪಗಳಿಸುವರು. ಅದರಿಂದ ಭೂಮಿಯು ಬೂದಿಬಳಿದುಕೊಂಡು ತುಣುಕು ಎಲುಬುಗಳ ಮಾಲೆಧರಿಸಿ, ನರಶಿರವನ್ನು ಕೈಯಲ್ಲಿ ಹಿಡಿದುಹೊರಟ ಕಪಾಲಿಯ ವ್ರತವನ್ನು ಹಿಡಿದಂತೆ ಕಾಣಿಸುವುದು, ಮತ್ತು ಸೂರ್ಯಪುತ್ರನಾದ ಯಾವಾಗ ಶನಿಯು ರೋಹಿಣೀಶಕಟವನ್ನು ಭೇದಿಸಿ ಮಂಗಳ ಅಥವಾ ಚಂದ್ರನ ಬಳಿಗೆ ಹೋಗುವನು, ಅದರಿಂದ ಹನ್ನೆರಡುವರ್ಷ ದುರ್ಭಿಕ್ಷ ಬರುವುದು ಎಂದು ವರಾಹಮಿಹಿರರು ಹೇಳಿರುವರು. 

ಹೀಗೆ ಒಮ್ಮೆ ಭಾರತದಲ್ಲಿ ಹನ್ನೆರಡುವರ್ಷ ಮಹಾಕ್ಷಾಮ ಉಂಟಾಗಿತ್ತು. ಆದರೆ ಗೌತಮರ ಆಶ್ರಮವು ಮಾತ್ರ ಸುಭಿಕ್ಷವಾಗಿತ್ತು. ಅನೇಕ ಋಷ್ಯಾಶ್ರಮಗಳಲ್ಲಿ ಜನರು ಕ್ಷಾಮದಿಂದ ಬಹುಕಷ್ಟಕ್ಕೆ ಸಿಕ್ಕು ಜೀವಿಸುವುದೇ ದುಸ್ಸಾಧ್ಯವಾಗಿದ್ದಿತು. ಅದನ್ನು ತಿಳಿದು ಕರುಣಾಳುಗಳಾದ ಗೌತಮರು ಆ ಎಲ್ಲ ಆಶ್ರಮಗಳಲ್ಲಿದ್ದ ಋಷಿ ಮುನಿಗಳನ್ನು ಪರಿವಾರಸಹಿತವಾಗಿ ತಮ್ಮ ಆಶ್ರಮಕ್ಕೆ ಕರೆತಂದು ಸುಮಾರು ೧೨ ವರ್ಷಕಾಲ ಪ್ರೀತಿಯಿಂದ ಸಂರಕ್ಷಿಸಿದರು. ದೈವಾನುಗ್ರಹದಿಂದ ಕ್ಷಾಮತೊಲಗಿ ಮಳೆ ಬೆಳೆಗಳಾಗಿ ಸುಭಿಕ್ಷವಾದಮೇಲೆ ಋಷಿಮುನಿಗಳು ತಮ್ಮ ತಮ್ಮ ಆಶ್ರಮಗಳಿಗೆ ಹೊರಡಲು ಅಪ್ಪಣೆಕೊಡಬೇಕೆಂದು ಗೌತಮರನ್ನು ಪ್ರಾರ್ಥಿಸಿದರು. ಗೌತಮರು ಇನ್ನೂ ಕೆಲಕಾಲ ಇದ್ದುಹೋಗಿ ಎಂದು ಹೇಳಿದರು. ಹೀಗೆ ನಾಲ್ಕಾರು ತಿಂಗಳು ಕಳೆದ ಮೇಲೆ ಋಷಿಗಳು ಹೊರಡಲು ಅಪ್ಪಣೆಕೊಡಬೇಕೆಂದು ಗೌತಮರನ್ನು ಪ್ರಾರ್ಥಿಸಿದರು, ಗೌತಮರು ಇನ್ನೂ ಕೆಲಕಾಲ ಇದ್ದುಹೋಗಿ ಎಂದು ಹೇಳಿದರು. ಹೀಗೆ ಪುನಃ ನಾಲ್ಕಾರು ತಿಂಗಳು ಕಳೆದರೂ ಗೌತಮರು ಋಷಿಗಳಿಗೆ ಹೊರಡಲು ಅಪ್ಪಣೆಕೊಡದೆ ಅಲ್ಲೇ ಇದ್ದು ತಪೋನಿರತರಾಗುವಂತೆ ತಿಳಿಸಿದರು. ಅದರಿಂದ ಋಷಿಗಳಿಗೆ ನಿರಾಶೆಯಾಯಿತು. ತಮ್ಮ ಆಶ್ರಮಗಳಿಗೆ ಹೋಗಲು ಅವರು ತವಕಿಸಿದರು. ಗೌತಮರು ಹನ್ನೆರಡುವರ್ಷ ತಮ್ಮನ್ನು ರಕ್ಷಿಸಿದ್ದಾರೆ, ಅವರ ಮಾತೆಂತು ಮೀರುವುದು ? ಹಾಗೆಂದು ಎಷ್ಟು ದಿನ ಇಲ್ಲಿರುವುದು ? ಅವರ ಮಾತುಮೀರಿ ಹೊರಟರೆ ಅವರ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ. ತಾವು ಹೇಗಾದರೂ ಹೊರಡಲೇಬೇಕು. ಅದಕ್ಕೆ ಏನಾದರೊಂದು ಉಪಾಯಮಾಡಿ ಹೊರಡಬೇಕೆಂದು ಅವರು ನಿಶ್ಚಯಿಸಿದರು. 

ಋಷಿಮುನಿಗಳ ಅಪೇಕ್ಷೆ ಪೂರ್ಣವಾಗಲು ಒಂದು ಸಂದರ್ಭವು ತಾನಾಗಿ ಒದಗಿ ಬಂದಿತು. ಒಂದು ದಿನ ಕೈಲಾಸಕ್ಕೆ ಹೋದ ನಾರದರು ಶ್ರೀಪಾರ್ವತೀದೇವಿಯ ಮುಂದೆ “ತಾಯಿ, ನಿನ್ನ ಪತಿಯು ತನ್ನ ತಲೆಯಮೇಲೆ ನಿನ್ನ ಸವತಿಯಾದ ಗಂಗೆಯನ್ನು ಕೂಡಿಸಿಕೊಂಡಿದ್ದಾನೆ. ಇದು ನಿನಗೆ ದುಃಖದಾಯಕವಲ್ಲವೇ ? ಹೇಗಾದರೂ ಮಾಡಿ ಗಂಗೆಯನ್ನು ಶಿವನಜಟೆಯಿಂದ ಹೊರಡುವಂತೆ ಮಾಡಿ ನಿನ್ನ ಸ್ಥಾನ ಮಾನಗಳನ್ನು ಕಾಪಾಡಿಕೊಳ್ಳಮ್ಮ” ಎಂದು ಪ್ರಚೋದಿಸಿದರು. “ಪತಿಗೆ ಅಹಿತವಾದ ಕಾರ್ಯ ನಾನು ಮಾಡಲಾರೆ” ಎಂದು ಪಾರ್ವತೀದೇವಿ ನುಡಿದಳು. ನಾರದರು ಅಷ್ಟಕ್ಕೇ ಬಿಡದೆ ವಿಘ್ನರಾಜನ ಬಳಿಬಂದು “ಗಣನಾಯಕ ! ನಿನ್ನ ತಂದೆ ನಿನ್ನ ತಾಯಿಯ ಸವತಿಯಾದ ಗಂಗೆಯನ್ನು ಶಿರದಮೇಲೆ ಕೂಡಿಸಿಕೊಂಡಿದ್ದಾನೆ. ಅದರಿಂದ ನಿನ್ನ ತಾಯಿ ಬಹುದುಃಖಿತಳಾಗಿದ್ದಾಳೆ. ಅವಳ ದುಃಖವನ್ನು ಪರಿಹರಿಸುವುದು ಪುತ್ರನಾದ ನಿನ್ನ ಕರ್ತವ್ಯವಲ್ಲವೇ ?” ಎಂದು ಪ್ರಚೋದಿಸಲು, ಗಣಪತಿಯು “ನಾರದರೇ, ನಾನೀಕಾರ್ಯವನ್ನು ಸಾಧಿಸುತ್ತೇನೆ” ಎಂದು ಹೇಳಿ ಬ್ರಹ್ಮಚಾರಿಯ ರೂಪತಾಳಿ ಗೌತಮರ ಆಶ್ರಮಕ್ಕೆ ಬಂದು ಋಷಿಮುನಿಗಳಿಗೆ ಗೌತಮರ ಆಶ್ರಮದಿಂದ ಹೊರಡಲು ಒಂದು ಉಪಾಯವನ್ನು ಹೇಳಿಕೊಟ್ಟು ತೆರಳಿದನು. 

ವಟುರೂಪದ ಗಣಪತಿಯು ತಿಳಿಸಿದ ಉಪಾಯದಿಂದ ಋಷಿಗಳಿಗೆ ಬಹಳ ಆನಂದವಾಯಿತು. ಆಗ ಋಷಿಮುನಿಗಳು 

ತಮ್ಮ ತಪಶಕ್ತಿಯ ಪ್ರಭಾವದಿಂದ ಒಂದು ಬಡಕಲು ಗೋವನ್ನು ಸೃಷ್ಟಿಸಿ ಗೌತಮರ ಗದ್ದೆಗೆ ಬಿಟ್ಟರು. ಗೋವು ಗದ್ದೆಯ ಪೈರುಗಳೆಲ್ಲವನ್ನೂ ತಿನ್ನಲಾರಂಭಿಸಿತು. ಅದೇ ಕಾಲಕ್ಕೆ ಅಲ್ಲಿಗೆ ಬಂದ ಗೌತಮರು ಗೋವು ಪೈರನ್ನು ತಿಂದು ನಾಶಮಾಡುತ್ತಿರುವುದನ್ನು ಕಂಡು ಅದನ್ನು ಅಟ್ಟಿಸಲು “ಹೇ ಹೇ” ಎಂದರು. ಅಷ್ಟರಿಂದಲೇ ಆ ಗೋವು ಕೆಳಗೆ ಬಿದ್ದು ಪ್ರಾಣ ಬಿಟ್ಟಿತು! ಗೌತಮರಿಗೆ ಗೋಹತ್ಯೆ ಮಾಡಿದೆನಲ್ಲಾ ಎಂದು ದುಃಖವಾಯಿತು. ಅದನ್ನೇ ನಿರೀಕ್ಷಿಸುತ್ತಿದ್ದ ಋಷಿಮುನಿಗಳು ಅಲ್ಲಿಗೆ ಧಾವಿಸಿಬಂದು “ಸ್ವಾಮಿ, ಎಂತಹ ಅಧರ್ಮಕಾರ್ಯ ಮಾಡಿದಿರಿ! ಅನ್ಯಾಯವಾಗಿ ಗೋಹತ್ಯೆಮಾಡಿದಿರಲ್ಲ, ಇಂತಹ ಸ್ಥಳದಲ್ಲಿ ನಾವಿರಲಾರೆವು. ಇಕೋ ನಾವು ಹೊರಟೆವು” ಎಂದು ಹೇಳಿ ಗಂಟುಮೂಟೆ ಕಟ್ಟಿಕೊಂಡು ಎಲ್ಲರೂ ಗೌತಮರ ಆಶ್ರಮವನ್ನು ತ್ಯಜಿಸಿ ತಮ್ಮ ತಮ್ಮ ಆಶ್ರಮಗಳಿಗೆ ಹೊರಟುಬಿಟ್ಟರು!

ಒಂದು ಕಡೆ ಬಹುದಿನದಿಂದಿದ್ದ ಬ್ರಾಹ್ಮಣಪರಿವಾರವೆಲ್ಲ ಹೊರಟುಹೋಯಿತಲ್ಲಾ ಎಂಬ ದುಃಖ, ಮತ್ತೊಂದು ಕಡೆ ಗೋಹತ್ಯಾಪಾಪವು ಬಂದೊದಗಿತಲ್ಲಾ ಎಂಬ ಚಿಂತೆ, ಇದರಿಂದ ಗೌತಮರು ಮರುಗಿದರು. ಇದೇಕೆ ಹೀಗಾಯಿತು ? ಎಂದವರು ಚಿಂತಿಸಿದರು. ಮೊದಲು ಗೋಹತ್ಯಾದೋಷದಿಂದ ಮುಕ್ತರಾಗಬೇಕೆಂದು ಅವರು ಭಕ್ತಿಯಿಂದ ಗಂಗಾದೇವಿಯನ್ನು ಪ್ರಾರ್ಥಿಸಿದರು. ಭಕ್ತಪರಾಧೀನಳಾದ ಗಂಗಾದೇವಿಯು ಶಿವನಜಟೆಯಿಂದ ಧರೆಗಿಳಿದುಬಂದು ಮೃತವಾಗಿದ್ದ ಆ ಗೋವಿನ ಮೇಲೆ ಹರಿದಳು! ಏನಾಶ್ಚರ್ಯ! ಗೋವು ಬದುಕಿತು. ಅದರ ಬಾಯಿಂದ ನೀರು ಹೊರಹೊಮ್ಮಿ ಪ್ರವಹಿಸಿತು. “ಗವಾ ದೀಯತೇ ಇತಿ ಗೋದು, ಗೋದಂ ವಾರಿ ಯಸ್ಯಾಸ್ಟಾ ಗೋದಾವಾರೀ ಗೋದಾವಾರೀ ಏವ ಗೋದಾವರೀ” ಎಂಬ ವ್ಯುತ್ಪತ್ತಿಯಂತೆ ಗಂಗೆಯು ಗೋವಿನ ಬಾಯಿಂದ ಹೊರಬಂದು ನದಿಯಾಗಿ ಹರಿದಿದ್ದರಿಂದ ಗಂಗೆ, ಗೋದಾವರೀ ಎಂಬ ಹೆಸರಾಯಿತು. ಗಂಗೆಯು ಶಿವನ ಜಟೆಯಿಂದ ಇಳಿದು ಬಂದು ಗೋವಿನ ಮುಖದಿಂದ ಗೋದಾವರಿ ಎನಿಸಿ ಹೊರಬಿದ್ದುದರಿಂದ ನಾರದ-ಪಾರ್ವತಿ-ಗಣಪತಿಗಳಿಗೂ ಸಂತೋಷವಾಯಿತು. 

ಗೋವು ಬದುಕಿದಮೇಲೆ ಗೌತಮರು ಅದು ಮೃತವಾಗಲು ಕಾರಣವೇನೆಂದು ಜ್ಞಾನ ದೃಷ್ಟಿಯಿಂದ ಪರೀಕ್ಷಿಸಿದಾಗ ಅವರಿಗೆ, ಬ್ರಾಹ್ಮಣರು ಮಂತ್ರಶಕ್ತಿಯಿಂದ ಗೋವನ್ನು ನಿರ್ಮಿಸಿ ತಾವು ಗೋಹತ್ಯಾದೋಷಕ್ಕೆ ಪಾತ್ರಾರಾಗುವಂತೆ ಮಾಡಿದರೆಂಬುದು ವ್ಯಕ್ತವಾಯಿತು. ಋಷಿಮುನಿಗಳು ತಾವು ಮಾಡಿದ ಉಪಕಾರಕ್ಕೆ ಕೃತಜ್ಞರಾಗದೆ ಈ ರೀತಿ ಜ್ಞಾನ-ಮಂತ್ರ ಬಲದಿಂದ ಗೋವನ್ನು ನಿರ್ಮಿಸಿ ತಮಗೆ ಗೋಹತ್ಯಾ ಪಾಪವನ್ನು ಕಟ್ಟಿ ಹೊರಟು ಹೋದುದರಿಂದ ಅವರಿಗೆ ಬಹಳ ಕೋಪವುಂಟಾಯಿತು. “ಜ್ಞಾನಬಲದಿಂದಲ್ಲವೇ ಅವರು ಇಂಥ ಅಕಾರ ಮಾಡಿದರು ? ಅವರ ಜ್ಞಾನವೇ ನಷ್ಟವಾಗಲಿ” ಎಂದು ಗೌತಮರು ಶಾಪಕೊಟ್ಟುಬಿಟ್ಟರು. “ಗೌತಮಸ್ಯ ಋಷೇಶಾಪಾತ್ ಜ್ಞಾನೇತಜ್ಞಾನತಾಂ ಗತೇ” ಎಂಬಂತೆ ಗೌತಮರ ಶಾಪದಿಂದ ದ್ವಾಪರದಲ್ಲಿ ಜ್ಞಾನವು ನಷ್ಟವಾಗಿ ಅಜ್ಞಾನವು ಎಲ್ಲೆಡೆ ಪಸರಿಸಿತು. ಇದರಿಂದ ಸಜ್ಜನರಿಗೆ ಬಹಳ ಕಷ್ಟವಾಯಿತು. ಆಗ ಕೃಪಾಳುಗಳಾದ ಬ್ರಹ್ಮರುದ್ರೇಂದ್ರಾದಿಗಳ ಪ್ರಾರ್ಥನೆಯಂತೆ ಶ್ರೀಮನ್ನನಾರಾಯಣನು ಶ್ರೀವೇದವ್ಯಾಸರೂಪದಿಂದ ಅವತರಿಸಿ ಜ್ಞಾನ ಪ್ರತಿಷ್ಠಾಪನೆ ಮಾಡಬೇಕಾಗಿ ಬಂದಿತು. ಹೀಗೆ ಗೌತಮಮಹರ್ಷಿಗಳು ದ್ವಾದಶ ವರ್ಷ ಅನ್ನದಾನವನ್ನಲ್ಲದೇ, ಶಿವನಜಟೆಯಲ್ಲಿದ್ದ ಗಂಗೆಯನ್ನು ಧರೆಗೆ ಕರತರಿಸಿ ಗೋದಾವರೀ ರೂಪದಿಂದ ಗಂಗೆಯು ಭಾರತದಲ್ಲಿ ಹರಿಯುವಂತೆ ಮಾಡಿದ ಮಹನೀಯರು ಎಂದು ಜಗತ್ತಿನಲ್ಲಿ ಪ್ರಖ್ಯಾತರಾದರು. 

ಇತರ ಮಹರ್ಷಿಗಳಲ್ಲಿಲ್ಲದ ಅಸಾಧಾರಣ ಮಹಿಮೆಯು ಗೌತಮರಲ್ಲಿರುವುದು ಮತ್ತೊಂದು ವೈಶಿಷ್ಟ್ಯ. ಗೌತಮರು ಶ್ರೀಹರಿಯ ಪ್ರೇರಣೆಯಂತೆ ಅಸುರಜನ ಮೋಹನಾರ್ಥವಾಗಿ ಐದು ಅಧ್ಯಾಯಾತ್ಮಕವಾದ ನ್ಯಾಯಶಾಸ್ತ್ರವನ್ನು ರಚಿಸಿ ಶ್ರೀವೇದವ್ಯಾಸದೇವರ ಅವತಾರಕ್ಕೆ ಕಾರಣರಾದರು. ಅವರು ನ್ಯಾಯಶಾಸ್ತ್ರವನ್ನು ರಚಿಸಿದ್ದರಿಂದ ಸಾಕ್ಷಾತ್ ನಾರಾಯಣಾಭಿನ್ನರಾದ ಶ್ರೀವೇದವ್ಯಾಸರು ಅವತರಿಸಿ, ವೇದವಿಭಾಗ ಪೂರ್ವಕವಾಗಿ ವೇದಾರ್ಥನಿರ್ಣಾಯಕ ಬ್ರಹ್ಮಮೀಮಾಂಸಾಶಾಸ್ತ್ರವನ್ನು (ಬ್ರಹ್ಮ ಸೂತ್ರಗಳು) ಮತ್ತು ಹದಿನೆಂಟು ಪುರಾಣ-ಉಪಪುರಾಣಗಳನ್ನು ರಚಿಸಿ ಜಗತ್ತಿನಲ್ಲಿ ಅವರಿಸಿದ್ದ ಅಜ್ಞಾನವನ್ನು ಪರಿಹರಿಸಿ, ಮುಕ್ತಿಯೋಗ್ಯ ಸಜ್ಜನರಿಗೆ ಜ್ಞಾನವನ್ನು ಬೋಧಿಸಿ ಅನುಗ್ರಹಮಾಡಿದರು. ಇಂತು ಮಹಾಮಹಿಮೋಪೇತರು ಗೌತಮರು. ಅಂತಹ ಗೌತಮರ ವಂಶದಲ್ಲಿ ಅನೇಕ ಭೂಸುರರು ಜನಿಸಿದರು. 

ಗೌತಮರ ವಂಶವು ಸಾಧಾರಣವಾದುದಲ್ಲ. ಇದು ತನ್ನ ಭೋಗಭಾಗ್ಯಗಳಿಂದ ಸ್ವರ್ಗಲೋಕವನ್ನು ಮೀರಿಸಿದೆ: ಈ ಸದ್ದಂಶದಲ್ಲಿ ಮುಕ್ತಿ” ಎಂಬ ಉತ್ತಮ ಫಲವನ್ನು ಹೊಂದಿದವರಿದ್ದಾರೆ: ಈ ವಂಶದಲ್ಲಿ ಅನೇಕ ಮುಕ್ತಾಫಲಗಳು ಕಂಗೊಳಿಸಿವೆ. ಉತ್ತಮ ಶೀಲಸಂಪನ್ನರು ಇಲ್ಲಿ ಜನಿಸಿದ್ದಾರೆ. ಗೌತಮವಂಶವು ಬಿದಿರುವೃಕ್ಷದಂತೆ ಅವಿಚ್ಛಿನ್ನವಾಗಿರುವುದರಿಂದ ಅದರ ಅಗ್ರಭಾಗವು ಕಣ್ಣಿಗೆ ಕಾಣದಂತಾಗಿದೆ. ಇಲ್ಲಿ ಸುಧಾಪ್ರಾಶನ (ಅಮೃತಪ್ರಾಶನ) ಮಾಡಲು ಅರ್ಹರಾದ ಅನೇಕ ಭೂಸುರರಿದ್ದಾರೆ. 'ಸುಧಾಶನೇಶಾಃ' ಅಂದರೆ ಶ್ರೀಮನ್ಯಾಯಸುಧಾದಿ ಗ್ರಂಥಗಳನ್ನು ಪಾಠ ಪ್ರವಚನಮಾಡುವ ಉದ್ದಾಮ ಪಂಡಿತರು ಈ ವಂಶದಲ್ಲಿ ಜನಿಸಿದ್ದಾರೆ. 

ಸೌಜನ್ಯ-ವಿನಯ್-ಗಾಂಭೀರ್ಯ-ಸೌಂದರ್ಯಾದಿ ಶ್ರೇಷ್ಠ ಗುಣಗಳಲ್ಲಿ ತಂದೆಯನ್ನು ಹೋಲುವ ಅನೇಕ ಕನ್ನಿಕೆಯರೂ, ಅಣ್ಣನನ್ನು ಹೋಲುವ ತಮ್ಮಂದಿರೂ ಗೌತಮ ವಂಶದಲ್ಲಿ ಜನಿಸಿ ಖ್ಯಾತರಾಗಿದ್ದಾರೆ. ಹೀಗೆ ವಿಖ್ಯಾತವಾದ ಷಾಷ್ಠಿಕ ವಂಶದ ಗೌತಮಗೋತ್ರದ-ಬೀಗಮುದ್ರೆ ಮನೆತನದಲ್ಲಿ ಶ್ರೀಕೃಷ್ಣಾಚಾರ್ಯರೆಂಬ ಓರ್ವ ಧೀಮಂತರು ಜನಿಸಿದರು. ಈ ಕೃಷ್ಣಾಚಾರ್ಯರು ಅಪಾರ ಕೀರ್ತಿಗಳಿಸಿ ಲೋಕ ವಿಖ್ಯಾತರಾದರು.