ಕಲಿಯುಗ ಕಲ್ಪತರು ಐದನೆಯ ಉಲ್ಲಾಸ ಶ್ರೀರಾಘವೇಂದ್ರಗುರುಸಾರ್ವಭೌಮರು ೪. ಕನ್ನಡ ಚಕ್ರೇಶನ ವಿದ್ಯಾಗುರುಗಳು
ಕೃಷ್ಣಾಚಾರ್ಯರು ರಾಜಾಸ್ಥಾನ ವಿದ್ವಾಂಸರಾದ ಸ್ವಲ್ಪಕಾಲದಲ್ಲಿಯೇ ತಮ್ಮ ಪಾಂಡಿತ್ಯ, ಪ್ರತಿಭೆ, ವಿನಯಾದಿಸದ್ಗುಣಗಳು ಹಾಗೂ ಭವ್ಯವ್ಯಕ್ತಿತ್ವದಿಂದ ಆಸ್ಥಾನದಲ್ಲಿ ಎಲ್ಲರ ಪ್ರೀತಿವಿಶ್ವಾಸಗಳನ್ನು ಗಳಿಸಿದರು. ಸಾಮ್ರಾಜ್ಯದ ಉನ್ನತ ಅಧಿಕಾರ ವರ್ಗ, ರಾಜಮನೆತನದವರು, ಸಾರ್ವಭೌಮರ ಗೌರವಕ್ಕೂ, ಶ್ರೀವ್ಯಾಸರಾಜರ ಅನುಗ್ರಹಕ್ಕೂ ಪಾತ್ರರಾಗಿದ್ದ ಆಚಾರ್ಯರನ್ನು ಅದರ ವಿಶ್ವಾಸಗಳಿಂದ ಮಾನಿಸುತ್ತಿದ್ದರು.
ಕೃಷ್ಣದೇವರಾಯರು ಆಚಾರ್ಯರ ಶಾಸ್ತ್ರ ಪಾಂಡಿತ್ಯ-ಜೊತೆಗೆ ಗಾಂಧರ್ವಕಲಾ ಪಾರೀಣತೆಯನ್ನು ಕಂಡು ಬಹು ಹರ್ಷಿಸುತ್ತಿದ್ದರು, ಆಚಾರ್ಯರ ವೀಣಾವಾದನವನ್ನು ಕೇಳಿದಂತೆಲ್ಲಾ ಪ್ರಭುಗಳ ಹೃದಯದಲ್ಲಿ ತಾವೂ ವೀಣೆಯನ್ನು ಕಲಿಯುವ ಹಂಬಲವುಂಟಾಗುತ್ತಿತ್ತು. ಬರಬರುತ್ತಾ ವೀಣೆಯ ಮೇಲಿನ ಮೋಹ ಅಧಿಕವಾಯಿತು. ಒಂದು ದಿನ ಏಕಾಂತದಲ್ಲಿ ಕೃಷ್ಣಾಚಾರ್ಯರ ಮುಂದೆ ತಮ್ಮ ಮನೀಷೆಯನ್ನರುಹಿದರು, ಸಾರ್ವಭೌಮರಿಗಿರುವ ಸಂಗೀತಪ್ರೇಮವನ್ನು ಕಂಡು ಮುದಿಸಿದ ಅಚಾರ್ಯರು ಮಹಾಪ್ರಭುಗಳಿಗೆ ವೀಣಾವಾದನ ಕಲೆಯನ್ನು ಕಲಿಸಲು ಅತಿ ಹರ್ಷದಿಂದ ಒಪ್ಪಿದರು.
ಒಂದು ಶುಭಮುಹೂರ್ತದಲ್ಲಿ ಅರಮನೆಯಲ್ಲಿ ಆಚಾರ್ಯರು “ಸರಸ್ವತೀ ಹಾಗೂ ವೀಣಾಪೂಜೆ'ಗಳನ್ನು ಕೃಷ್ಣದೇವರಾಯರಿಂದ ಮಾಡಿಸಿ ಅವರಿಗೆ ವೀಣಾಪಾಠವನ್ನು ಪ್ರಾರಂಭಿಸಿದರು. ಪ್ರತಿದಿನ ಒಂದೆರಡು ಗಂಟೆಗಳಕಾಲ ವೀಣಾಪಾಠ ನೇರವೇರುತ್ತಿತ್ತು. ಸಾಮ್ರಾಟರು ಸಂಗೀತ, ಸಾಹಿತ್ಯಕಲೆಗಳಲ್ಲಿ ನಿಪುಣರಾಗಿ ಆ ವಿದ್ಯೆಯಲ್ಲಿ ಆಳವಾದ ಜ್ಞಾನವನ್ನು ಪಡೆದಿದ್ದುದರಿಂದ ವೀಣಾವಾದನ ಕಲೆಯನ್ನು ಕರಗತ ಮಾಡಿಕೊಳ್ಳಲು ಅವರಿಗೆ ಹೆಚ್ಚು ಶ್ರಮವೆನಿಸಲಿಲ್ಲ. ಮಹಾರಾಜರ ಶ್ರದ್ಧೆ, ಹೊಸ ಹೊಸ ಕ್ರಮಗಳನ್ನು ತಿಳಿದುಕೊಳ್ಳುವುದರಲ್ಲಿ, ಮತ್ತು ಅಭ್ಯಾಸದಲ್ಲಿನ ಉತ್ಸಾಹವನ್ನು ಗಮನಿಸಿದ ಕೃಷ್ಣಾಚಾರ್ಯರು ವಿಶೇಷ ಶ್ರದ್ಧೆವಹಿಸಿ ಪಾಠಹೇಳಿಕೊಡಲಾರಂಭಿಸಿದರು. ಮೂರುನಾಲ್ಕು ವರ್ಷಗಳಲ್ಲೇ ಕೃಷ್ಣನರಪತಿಗಳು ವೀಣಾವಾದನಕಲೆಯಲ್ಲಿ ಅಸಾಧಾರಣ ಪಾಂಡಿತ್ಯಗಳಿಸಿದರು. ಅವರ ಪ್ರತಿಭೆ, ಗ್ರಹಣಶಕ್ತಿ, ಆದರ ನಿಷ್ಠೆಗಳನ್ನು ಕಂಡು ಆಚಾರ್ಯರು ಆನಂದಿಸಿ ವೀಣಾವಾದನಕಲೆಯ ಕೆಲ ಅಪಾರ್ವವಿಷಯಗಳನ್ನು ಪ್ರಭುಗಳಿಗೆ ಕಲಿಸಿದರು. ಅನೇಕ ಸಂದರ್ಭಗಳಲ್ಲಿ ಕೃಷ್ಣಮಹೀಪಾಲರು ವೀಣಾವಾದನ ಮಾಡುವುದನ್ನು ಕೇಳಿದಾಗ ಅಚಾರ್ಯರ ಮೈಪುಳಕಿಸುತ್ತಿತ್ತು! ವಿದ್ಯಾಭ್ಯಾಸ ಮುಗಿಯಿತು. ಕೃಷ್ಣಾಚಾರ್ಯರಿಗೆ ಓರ್ವ ಶ್ರೇಷ್ಠಕಲಾವಿದನನ್ನು ತಯಾರುಮಾಡಿದ ತೃಪ್ತಿಯುಂಟಾಯಿತು.
ಕೃಷ್ಣಾಚಾರ್ಯರು ರಾಜಾಸ್ಥಾನ, ಗುರುಸ್ಥಾನಗಳಲ್ಲಿ ಖ್ಯಾತರಾಗಿ ನಾಲ್ಕಾರು ವರ್ಷಗಳಲ್ಲಿ ಶ್ರೀವ್ಯಾಸಭಗವಾನರ ಆದರ-ಪ್ರೀತಿ-ಸಹಾಯ, ಸಾರ್ವಭೌಮರ ಪ್ರೋತ್ಸಾಹ ಔದಾರ್ಯಗಳಿಂದ ವಿಜಯನಗರದಲ್ಲಿ ಪ್ರಸಿದ್ಧರಾದರು. ಭವ್ಯಮಂದಿರ ಪೀಠೋಪಕರಣಗಳು, ಸುವರ್ಣ-ರಜತಪಾತ್ರೆ-ಪದಾರ್ಥಗಳು, ವಸ್ತ್ರಾಲಂಕಾರಗಳು ಆಳು-ಕಾಳು, ಕುದುರೆ ಸಾರೋಟು, ಅಡಿಗೆಯವರು, ನೀರಿನವರು - ಹೀಗೆ ಸಿರಿ-ಸಂಪತ್ತು, ವೈಭವಗಳಿಂದ ವಿರಾಜಿಸುತ್ತಾ ಕೃಷ್ಣಾಚಾರ್ಯರು ರಾಜಧಾನಿಯಲ್ಲಿ ಸಕಲರಿಂದ ಮಾನ-ಮರ್ಯಾದೆ-ಶ್ಲಾಘನೆಗಳಿಗೆ ಪಾತ್ರರಾಗಿ ಸುಖ-ಸಂತೋಷಗಳಿಂದ ಸಂಸಾರವನ್ನು ಸಾಗಿಸಹತ್ತಿದರು.