ಕಲಿಯುಗ ಕಲ್ಪತರು ಐದನೆಯ ಉಲ್ಲಾಸ ಶ್ರೀರಾಘವೇಂದ್ರಗುರುಸಾರ್ವಭೌಮರು ೧೩. ಬಾಲಸರಸ್ವತಿ
ಉತ್ತರಭಾರತದ ಕೆಲಗಾಯಕರು, ವಾದಕೋವಿದರು ಭಾರತದಲ್ಲಿ ವಿಜಯಯಾತ್ರೆ” ಕೈಗೊಂಡು ಎಲ್ಲ ಕಡೆ ಜಯಗಳಿಸುತ್ತಾ ತಂಜಾಪುರಕ್ಕೆ ಬಂದು ರಾಜಾಸ್ಥಾನದ ಸಂಗೀತಗಾರರು, ವೀಣಾದಿವಾದ್ಯಗಾರರೊಡನೆ ಸ್ಪರ್ಧಿಸಿ ಎಲ್ಲರನ್ನೂ ಜಯಿಸಿ ಬಿಟ್ಟರು. ನಿಬಂಧನೆಯಂತೆ ತಂಜಾಪುರಾಧೀಶನೇ ಅವರಿಗೆ ಜಯಪತ್ರಿಕೆ ಬರೆದು ಕೊಡುವ ಪರಿಸ್ಥಿತಿಯುಂಟಾಯಿತು ! ಪ್ರಾಚೀನಕಾಲದಿಂದಲೂ ಸಂಗೀತಾದಿ ಕಲೆಗೆ ಅಪಾರ ಕೀರ್ತಿಗಳಿಸಿದ ತಂಜಾಪುರದ ರಾಜಸ್ಥಾನಕ್ಕೆ ಇಂದು ಕಲಂಕಬರುವ ಪ್ರಸಂಗ ಬಂದೊದಗಿದೆ ! ಅದರಿಂದ ರಾಜ ಚಿಂತಾಕ್ರಾಂತನಾಗಿದ್ದಾನೆ. ಯುವರಾಜನಾದ ಚಿನ್ನಚವ್ವಪ್ಪನಾಯಕನು ಅಣ್ಣ ಚವಪ್ಪನಾಯಕನಿಗೆ ಸಮಾಧಾನಹೇಳಿ “ಅಣ್ಣ ! ಈ ಸಂದರ್ಭದಲ್ಲಿ ನಮ್ಮ ಗೌರವಕಾಪಾಡಲು ಶ್ರೀವಿಜಯೀಂದ್ರ ಗುರುಗಳೊಬ್ಬರೇ ಸಮರ್ಥರು. ಅವರಿಗೆ ನಾವು ಶರಣುಹೋಗಬೇಕು” ಎಂದು ತಿಳಿಸಿದನು. ಆಗ ಚವಪ್ಪನಾಯಕನಿಗೆ ಆನಂದವಾಯಿತು. “ನಿಜ ಸಹೋದರ ! ಈವೊಂದು ಸಂದರ್ಭದಲ್ಲಿ ಆ ಮಹನೀಯರನ್ನು ನಾವು ಮರೆತಿದ್ದರಿಂದಲೇ ನಮಗೀ ಅವಸ್ಥೆ ಪ್ರಾಪ್ತವಾಯಿತೆಂದು ನಾನೀಗ ಭಾವಿಸಿದ್ದೇನೆ. ಕುಂಭಕೋಣೆಗೆ ಹೋಗಿ ಎಲ್ಲ ವಿಚಾರವನ್ನೂ ಗುರುವರ್ಯರಲ್ಲಿ ವಿಜ್ಞಾಪಿಸಿ ಅವರನ್ನು ಗೌರವದಿಂದ ಇಲ್ಲಿಗೆ ಕರೆದುಕೊಂಡು ಬರಬೇಕು” ಎಂದು ತಮ್ಮನನ್ನು ಕುಂಭಕೋಣೆಗೆ ಕಳುಹಿಸಿದನು.
ಮರುದಿನ ಯುವರಾಜನು ಕಾವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ತಂಜಾಪುರಕ್ಕೆ ಬಂದು ಗುರುಪಾದರು ಇಂದು ಸಂಜೆ ದಿಗ್ವಿಜಯಮಾಡುವರು. ನಮ್ಮ ಗೌರವವನ್ನು ರಕ್ಷಿಸುವುದಾಗಿ ಅಭಯ ನೀಡಿರುವರು” ಎಂದು ಮಹಾರಾಜನಲ್ಲಿ ವಿಜ್ಞಾಪಿಸಿದನು. ಚವಪ್ಪನಾಯಕನಿಗೆ ಆನಂದವಾಯಿತು. ಮಿತಪರಿವಾರದೊಡನೆ ದಯಮಾಡಿಸಿದ ಶ್ರೀವಿಜಯೀಂದ್ರ ತೀರ್ಥರನ್ನು ರಾಜಗೌರವದಿಂದ ಸ್ವಾಗತಿಸಿ ಬಿಡಾರ ಮಾಡಿಸಿ ಫಲಮಂತ್ರಾಕ್ಷತೆಯನ್ನು ಪಡೆದು ಮಹಾರಾಜ ಅರಮನೆಗೆ ತೆರಳಿದನು.
ಅಂದು ಸಾಯಂದೀಪಾರಾಧನೆಯಾದ ಮೇಲೆ ವಿಜಯೀಂದ್ರರು ವಿಶ್ರಾಂತಿಧಾಮದಲ್ಲಿ ಧ್ಯಾನಮಗ್ನರಾಗಿದ್ದಾರೆ. ಸ್ವಲ್ಪದೂರದಲ್ಲಿ ಕುಮಾರ ತಿಮ್ಮಣ್ಣ ಕುಳಿತಿದ್ದಾನೆ. ಧ್ಯಾನದಿಂದ ಬಹಿರ್ಮುಖರಾದ ಶ್ರೀಗಳವರು “ತಿಮ್ಮಣ್ಣ, ಇಂದೇಕೋ ನಿನ್ನ ವೀಣಾವಾದನವನ್ನಾಲಿಸುವ ಮನಸ್ಸಾಗಿದೆ” ಎಂದರು. ತಿಮ್ಮಣ್ಣ ವೀಣೆಯನ್ನು ತಂದು ಗುರುಗಳೆದುರು ಕುಳಿತು ನುಡಿಸತೊಡಗಿದನು. ಆಗ ಶ್ರೀಯವರು “ನಿನ್ನ ವಾದನ ಚತುರತೆಯನ್ನು ನೋಡಿ ನಮಗೂ ವೀಣೆ ನುಡಿಸುವ ಆಸೆಯಾಗುತ್ತಿದೆ” ಎನಲು ಆನಂದಪರವಶನಾದ ತಿಮ್ಮಣ್ಣ “ಮಹಾಸ್ವಾಮಿ, ಬಹುದಿನದ ಆಶೆ, ಇಂದು ಫಲಿಸಿತು ಧನ್ಯನಾದೆ” ಎಂದು ಕನಕಾಚಲಾಚಾರರ ವೀಣೆಯನ್ನು ತಂದು ಗುರುಗಳ ಮುಂದಿಟ್ಟನು. ವಿಜಯೀಂದ್ರರೊಮ್ಮೆ ವೀಣೆಯ ಮೇಲೆ ಬೆರಳಾಡಿಸಿದರು. ಆ ಸುಮಧುರನಾದವನ್ನಾಲಿಸಿ ತಿಮ್ಮಣ್ಣರೋಮಾಂಚಿತನಾದ. ವಿಜಯೀಂದ್ರರು “ಕುಮಾರ, ನಾವು ವೀಣೆಯನ್ನು ನುಡಿಸುತ್ತೇವೆ. ನೀನು ನಮ್ಮನ್ನು ಅನುಸರಿಸು” ಎನಲು ತಿಮ್ಮಣ್ಣನು ಕರಮುಗಿದು “ಸ್ವಾಮಿ, ತಮ್ಮೊಡನೆ ವೀಣೆ ನುಡಿಸುವ ಯೋಗ್ಯತೆ ನನಗಿದೆಯೇ ?” ಎಂದು ಸಂದೇಹಿಸಿದನು.
ಆಗ ಗುರುಗಳು ನಕ್ಕು “ಹುಚ್ಚು ಹುಡುಗ ! ನಿನ್ನ ಯೋಗ್ಯತೆ ನಿನಗೆ ತಿಳಿಯದು. ಹೂಂ, ನಮ್ಮ ವೀಣಾವಾದನವನ್ನು ಅನುಸರಿಸು” ಎಂದು ಹಿಂದೋಳ (ಮಾಲಕಂಸ್) ರಾಗವನ್ನು ಆಲಾಪನೆಗೆ ತೆಗೆದುಕೊಂಡರು. ಗುರುಗಳ ವಿದ್ವತ್ತೂರ್ಣವೂ, ವೈವಿಧ್ಯಮಯವೂ ಆದ ವಾದನವನ್ನಾಲಿಸಿ ಆಶ್ಚರಾನಂತಪುಳಕಿತನಾಗಿ ತಾನೂ ಅವರ ವಾದನವನ್ನು ಅನುಸರಿಸಿ ಬಾರಿಸಹತ್ತಿದನು. ಶ್ರೀಗಳವರು ಅವನ ತಲೆಯ ಮೇಲೆ ಕರವಿರಿಸಿ ಆಶೀರ್ವದಿಸಿ “ಭಲೆ ಕುಮಾರ ! ಹೂಂ ನಾವೀಗ ಅಪೂರ್ವ ಕ್ರಮವನ್ನು ತೋರಿಕೊಡುವೆವು. ಇದು ದೇವಲೋಕದಲ್ಲಿ ಮಾತ್ರ ಪ್ರಸಾರದಲ್ಲಿದೆ. ಭೂಮಿಯಲ್ಲಿದು ಅಪೂರ್ವ. ಈ ಕ್ರಮಕ್ಕೆ 'ಗಾಂಧಾರಗ್ರಾಮ' ಎಂದು ಹೆಸರು. ಈಗ ನಾವು ಬಾರಿಸಿ ತೋರಿಸಿಕೊಟ್ಟದ್ದನ್ನು ನೀನು ಅಭ್ಯಾಸಮಾಡು. ನಮ್ಮೊಡನೆ ನುಡಿಸು. ಇದರಲ್ಲಿ ನೀನೂ ಪರಿಣತನಾದರೆ ಜಗತ್ತಿನಲ್ಲಿ ಮತ್ತಾರೂ ನಿನಗೆ ಸಾಟಿಯಾಗಲಾರದು” ಎಂದು ಹೇಳಿ ನಸುನಗುತ್ತಾ “ಗಾಂಧಾರಗ್ರಾಮ”ದ ಕ್ರಮದಲ್ಲಿ ವೈಶಿಷ್ಟ್ಯ ಪೂರ್ಣ ಗಮಕ, ಸ್ವರವಿನ್ಯಾಸ, ನರವಲ್ ಮುಂತಾದವನ್ನು ನುಡಿಸಹತ್ತಿದರು. ಅದೊಂದು ಅದ್ಭುತವಾದನವಾಗಿತ್ತು. ದೇವಲೋಕದ ಸಂಗೀತವೇ ಧರೆಗಿಳಿದು ಬಂದಿತ್ತು ! ಅದನ್ನು ಅನುಸರಿಸಿ ನುಡಿಸುವುದು ಕಷ್ಟವೆನಿಸಿದರೂ ಶ್ರೀಗಳವರು ಅವನ ಶಿರದ ಮೇಲೆ ಕರವಿರಿಸಿ ಆಶೀರ್ವದಿಸಿದಾಗ, ಅದರ ಫಲವೋ ಎಂಬಂತೆ ವಿಜಯೀಂದ್ರರ ಕರಸ್ಪರ್ಶದಿಂದ ತಿಮ್ಮಣ್ಣನ ಶರೀರದಲ್ಲಿ ಯಾವುದೋ ಒಂದು ನೂತನ ಶಕ್ತಿ ಪ್ರವಹಿಸಿದಂತಾಯಿತು. ತನಗರಿವಿಲ್ಲದಂತೆಯೇ ತಿಮ್ಮಣ್ಣ ಗುರುಗಳನ್ನು ಅನುಸಿರಿಸಿ ಬಾರಿಸಲಾರಂಭಿಸಿದ. ಸುಮಾರು ಒಂದೆರಡು ಘಂಟೆಗಳ ಕಾಲ ಹಿಂದೋಳ (ಮಾಲಕಸ್) ರಾಗವನ್ನೇ ಗಂಧಾರಗ್ರಾಮ ಕ್ರಮದಲ್ಲಿ ನಂದಾ, ವಿಶಾಲ, ಸುಮುಖೀ, ಚಿತ್ರಾ, ಚಿತ್ರವತೀ, ಸುಖಾ ಮತ್ತು ಆಲಾಪಾ ಎಂಬ ಏಳು ಬಗೆಯನ್ನು ಯಾರು ಹಿಂದೆ ಕೇಳರಿಯದ ರೀತಿಯಲ್ಲಿ ನುಡಿಸಿದ ವಿಜಯೀಂದ್ರರು ತಿಮ್ಮಣ್ಣನಿಗೂ ಅಭ್ಯಾಸಮಾಡಿಸಿದರು. ಆನಂತರ ತಿಮ್ಮಣ್ಣನು ಅದರಲ್ಲಿ ಪರಿಣಿತನಾದನೆಂದು ತಿಳಿದು ಶ್ರೀವಿಜಯೀಂದ್ರರು “ಕುಮಾರ ! ನಾಳೆ ವೀಣೆಯೊಡನೆ ರಾಜಾಸ್ಥಾನಕ್ಕೆ ಬಾ” ಎಂದು ಹೇಳಿ ವಿಶ್ರಾಂತಿ ಪಡೆದರು.
ತಂಜಾಪುರದ ರಾಜದರ್ಬಾರಿನಲ್ಲಿಂದು ಅಸಾಧ್ಯ ಜನಸಂದಣಿ. ಔತ್ತರೇಯ ಸಂಗೀತಗಾರರೊಡನೆ ಪೂಜ್ಯ 'ರಾಜಗುರು ವಿಜಯೀಂದ್ರರು ಸ್ಪರ್ಧಿಸುವರೆಂದು ಸಹಸ್ರಾರು ಜನರು ಕುತೂಹಲದಿಂದ ಬಂದು ನೆರೆದಿದ್ದಾರೆ. ಉನ್ನತವೇದಿಕೆಯ ಮೇಲೆ ಗುರುವರರು, ಚವಪ್ಪನಾಯಕ, ಅವನ ಸಹೋದರರು ಮಂಡಿಸಿದ್ದಾರೆ. ಎದುರು ಸಂಗೀತವೇದಿಕೆಯ ಮೇಲೆ ಔತ್ತರೇಯ ಸಂಗೀತಗಾರರು, ವಾದ್ಯನಿಪುಣರು ಕುಳಿತಿದ್ದಾರೆ. ಮಹಾರಾಜ ಎದ್ದು ನಿಂತು “ತಂಜಾವೂರಿನ ಗೌರವರಕ್ಷಣೆಗಾಗಿ ಪೂಜ್ಯ ಗುರುವರರು ಈ ಕಲೆಗಾರರೊಡನೆ ಸ್ಪರ್ಧಿಸುವರು. ಸಭಿಕರು ಶಾಂತರೀತಿಯಿಂದ ಕುಳಿತಿರಬೇಕು” ಎಂದು ಹೇಳಿದನು. ಆಗ ಉತ್ತರಾದಿ ಕಲೆಗಾರನೊಬ್ಬ ಮೇಲೆದ್ದು “ಇದೇನು ಹುಡುಗಾಟ ! ಸನ್ಯಾಸಿಗಳು ನಮಗೆ ಪ್ರತಿಸ್ಪರ್ಧಿಗಳೇ?” ಎಂದು ಹೂಂಕರಿಸಿದನು. ಆಗ ಮಂದಹಾಸಬೀರುತ್ತಾ ವಿಜಯೀಂದ್ರರು “ಕಲೆಗಾರರೇ ನಿಜ, ನಾವು ನಿಮಗೆ ಪ್ರತಿಸ್ಪರ್ಧಿಗಳಲ್ಲ. ಇಕೋ ನೋಡಿ, ನಮ್ಮಿ ಬಾಲಕ ಶಿಷ್ಯನೇ ನಿಮ್ಮೊಡನೆ ಸ್ಪರ್ಧಿಸುವನು” ಎಂದು ಹೇಳಿ “ತಿಮ್ಮಣ್ಣ, ಏಳು, ಈ ಔತ್ತರೇಯರೊಡನೆ ಸ್ಪರ್ಧಿಸು” ಎಂದು ಹೇಳಿದರು. ತಿಮ್ಮಣ್ಣಗುರುಗಳ ಮಾತುಕೇಳಿ ಅಚ್ಚರಿಗೊಂಡ. ಗುರುಗಳು ಮಂದಹಾಸಬೀರಿ ಸಂಜ್ಞೆ ಮಾಡಿದರು. ತಿಮ್ಮಣ್ಣನ ದೇಹದಲ್ಲಿ ವಿದ್ಯುತ್ತಂಚಾರವಾದಂತಾಗಿ ಪುಳಕಿತಗಾತ್ರನಾದ. ಶ್ರೀಯವರಿಗೆ ನಮಸ್ಕರಿಸಿ ವೀಣೆಯೊಡನೆ ವೇದಿಕೆಯನ್ನೇರಿ ಕುಳಿತ.
ಕೇವಲ ಹದಿನೈದು ವರ್ಷದ ಬಾಲಕ ಸ್ಪರ್ಧಿಸುವನೇ ಎಂದು ಸರ್ವರೂ ಚಕಿತರಾದರು. ಆಗ ಉತ್ತರಾದಿಕಲಾವಿದನೊಬ್ಬ ಮೇಲೆದ್ದು ನಿಂತು “ಮಹಾರಾಜರೇ, ನಿಮ್ಮ ಆಸ್ಥಾನದ ಕಲಾವಿದರೆಲ್ಲರೂ ಪರಾಜಿತರಾಗಿರುವಾಗ ಈ ಬಾಲಕ ಏನುಮಾಡಬಲ್ಲ ! ಹೂಂ, ಆಗಲಿ, ನಾನೇ ಇವನೊಡನೆ ವೀಣಾವಾದನದಲ್ಲಿ ಸ್ಪರ್ಧಿಸುವೆನು ನಾನು ಗೆದ್ದರೆ ಜಯಪತ್ರಿಕೆ ಬರೆದುಕೊಡಿ, ಬಾಲಕ ಗೆದ್ದರೆ ನಾವೆಲ್ಲರೂ ಪರಾಜಿತರಾದೆವೆಂದು ಒಪ್ಪುತ್ತೇವೆ” ಎಂದು ಹೇಳಿ ಆಧ್ಯತೆಯಿಂದ ವೀಣೆ ಹಿಡಿದು ವೇದಿಕೆಯನ್ನೇರಿ ಸ್ಪರ್ಧಾಕಣಕ್ಕಿಳಿದ. ಉತ್ತರಾದಿ ವೈಣಿಕ ಮಾಲಕಂಸ್‌ರಾಗ(ಹಿಂದೋಳ)ವನ್ನೇ ಬಾರಿಸಲಾರಂಭಿಸಿದ ! ಅದೂ ಹಿಂದಿನ ದಿನ ವಿಜಯೀಂದ್ರರು ನುಡಿಸಿ ತೋರಿಸಿದದ ಕ್ರಮದಲ್ಲೇ ! ತಿಮ್ಮಣ್ಣದಿಗ್ಧಾಂತನಾದ “ಆಹಾ, ನಮ್ಮ ಗುರುಗಳೆಂಥ ಜ್ಞಾನಿಗಳು. ಈ ಕಲೆಗಾರ ಇಂದು ಸ್ಪರ್ಧೆಗೆ ಆರಿಸಿಕೊಂಡ ರಾಗವನ್ನು ಅರಿತು ನನಗೆ ಅಭ್ಯಾಸಮಾಡಿಸಿದರಲ್ಲಾ! ಮಹಾನುಭಾವರು ನನಗೆ ಕೀರ್ತಿತರಲು ಇಂಥಾ ಅನುಗ್ರಹಮಾಡಿದ್ದಾರೆ. ನಾನೇ ಧನ್ಯ” ಎಂದು ಆನಂದ ಉತ್ಸಾಹದಿಂದ ಸ್ಪರ್ಧಿಸಲು ಸಿದ್ಧನಾದ.
ಹಿಂದೂಸ್ಥಾನಿ ವೈಣಿಕ ಮಾಲಕಂಸರಾಗವನ್ನು ಒಂದಾವರ್ತ ಬಾರಿಸಿ ತಿಮ್ಮಣ್ಣನತ್ತ ತಿರುಗಿ “ಹೂಂ, ನೀವೂ ಬಾರಿಸಿ” ಎಂದು ಗರ್ಜಿಸಿದ, ತಿಮ್ಮಣ್ಣ ಸುಲಭವಾಗಿ ಆತನಂತೆಯೇ ಒಂದಾವರ್ತ ನುಡಿಸಿದ. ಹಿಂದೂಸ್ಥಾನಿ ವೈಣಿಕ ಅದನ್ನಾಲಿಸಿ ಅಪ್ರತಿಭನಾದ! “ಏನೀ ಬಾಲಕನ ಸಾಮರ್ಥ್ಯ, ನಾನು ಬಾರಿಸಿದ್ದನ್ನು ಸುಲಭವಾಗಿ ನುಡಿಸಿಬಿಟ್ಟನಲ್ಲ” ಎಂದು ಆಶ್ಚರ್ಯಗೊಂಡ, ಕೂಡಲೇ ಕೋಪವೂ ಉಂಟಾಯಿತು. ಕಲಾತ್ಮಕವಾಗಿ ಮತ್ತೊಂದಾವರ್ತ ಬಾರಿಸಿದ, ತಿಮ್ಮಣ್ಣ ಅದೊಂದು ಲೀಲೆಯೆಂಬಂತೆ ತಾನೂ ನುಡಿಸಿದ, ಹೀಗೆ ಜಿದ್ದಿನಿಂದ ಅವರೀರ್ವರಲ್ಲಿ ಪೈಪೋಟಿ ನಡೆಯಿತು ! ಔತ್ತರೇಯ ವಿದ್ವಾಂಸ ತನ್ನ ಪಾಂಡಿತ್ಯವನ್ನೆಲ್ಲಾ ಪ್ರದರ್ಶಿಸಿದ. ತಿಮ್ಮಣ್ಣ ಅವನನ್ನೂ ಮೀರಿ ಪ್ರತಿಭೆತೋರಿದ. ಒಮ್ಮೆಯೂ ತಿಮ್ಮಣ್ಣ ವಿಚಲಿತನಾಗುವಂತೆ, ತಡವರಿಸುವಂತೆ ಮಾಡಲಾಗದ್ದನ್ನು ಕಂಡು ಆ ವೈಣಿಕ ಹೆದರಿದ, ಹಟದಿಂದ ಮತ್ತೆ ಮತ್ತೆ ಬಾಲ ಕಲಾವಿದನನ್ನು ಜಯಿಸಲು ಪ್ರಯತ್ನಿಸಿ ವಿಫಲನಾದ, ಕೊನೆಗೆ ವಿಜಯ ಅಸಾಧ್ಯವೆಂದರಿತು ತಲೆತಗ್ಗಿಸಿ ಕುಳಿತುಬಿಟ್ಟ ! ಸಭಾಸದರು ಹರ್ಷಾತಿರೇಕದಿಂದ ಕರತಾಡನ ಮಾಡಿದರು. ಮಹಾರಾಜನಿಗಾದ ಆನಂದ ಅವರ್ಣನೀಯ !
ಆಗ ಶ್ರೀಗಳವರು ನಸುನಕ್ಕು “ವೈಣಿಕರೇ ! ನಿಮ್ಮ ನಿಬಂಧನೆಯಂತೆ ಸ್ಪರ್ಧೆ ಮುಗಿಯಿತು. ಈ ಬಾಲಕಕಲಾವಿದ ಜಯಗಳಿಸಿದ, ಈಗ ನಮ್ಮ ನಿಬಂಧನೆ ಕೇಳಿರಿ, ಈಗ ಮತ್ತೆ ನೀವು ನುಡಿಸಿದ ಹಿಂದೋಳ(ಮಾಲಕಂಸ್)ರಾಗವನ್ನೇ ಈ ಬಾಲಕಲಾವಿದ ಬೇರೊಂದು ಕ್ರಮದಲ್ಲಿ ನುಡಿಸುತ್ತಾನೆ. ಅವನಂತೆ ನೀವೂ ನುಡಿಸಿದಲ್ಲಿ ನೀವೇ ಜಯಿಸಿದಿರಿ ಎಂದು ಘೋಷಿಸಿ ಜಯಪತ್ರಿಕೆ ಕೊಡಿಸುತ್ತೇವೆ. ನೀವು ಪರಾಜಿತರಾದರೆ, ಈವರೆಗೆ ಗಳಿಸಿದ ಜಯಪತ್ರಿಕೆಗಳೊಡನೆ ಸಂಪೂರ್ಣ ಪರಾಜಿತರಾದಂತೆ ನೀವು ಜಯಪತ್ರಿಕೆ ಬರೆದುಕೊಡಬೇಕು ! ಕುಮಾರ, ತಿಮ್ಮಣ್ಣ ! ಹೂಂ ಪ್ರಾರಂಭಿಸು” ಎಂದು ಏನೋ ಸಂಜ್ಞೆ ಮಾಡಿದರು. ತಿಮ್ಮಣ್ಣನಿಗೆ ಗುರುಗಳ ಅಭಿಪ್ರಾಯ ಸ್ಪಷ್ಟವಾಯಿತು. ಹಿಂದಿನದಿನ ಗುರುಗಳು ಅಭ್ಯಾಸಮಾಡಿಸಿದ ಗಾಂಧಾರಗ್ರಾಮಕ್ರಮದಲ್ಲಿ ನುಡಿಸಲಾರಂಭಿಸಿದನು ! ಹಿಂದೆಂದೂ ಕೇಳರಿಯದ ಆ ಅಪೂರ್ವ ವೀಣಾವಾದನ ಪಾಂಡಿತ್ಯವನ್ನು ಕಂಡು ಔತ್ತರೇಯ ವೈಣಿಕ ಮೇಲೆದ್ದು ಬಾಲಕಲಾವಿದನಿಗೆ ನಮಸ್ಕರಿಸಿ “ನೀವು ಮಾನವರಲ್ಲ, ಗಂಧರ್ವಾಂಶರೇ ಸರಿ. ನಾನು ಜಿತನಾದೆ” ಎಂದು ಹೇಳಿದನು. ಆಗ ಸಭಿಕರೆಲ್ಲ ಹರ್ಷಧ್ವನಿ ಜಯಕಾರಗಳಿಂದ ತಿಮ್ಮಣ್ಣನನ್ನು ಶ್ಲಾಘಿಸಿದರು. ತಿಮ್ಮಣ್ಣವಾದನ ಮುಂದುವರೆಸಿದ. ಅಶ್ರುತವಾದ ಪೂರ್ವವಾದ ಗಮಕಗಳು, ಸ್ವರವಿನ್ಯಾಸಗಳಿಂದ ಸರ್ವಜನರನ್ನು ಮಂತ್ರಮುಗ್ಧಗೊಳಿಸಿ ಆನಂದಾಬಿಯಲ್ಲಿ ಮುಳುಗೇಳಿಸುತ್ತಿರುವ ಆ ದೈವಿಕಗಾನದ ಅಮೃತಸ್ಯಂದಿಯಾದ ಮಂಗಳಕರ ನಾದತರಂಗ ರಾಜಾಸ್ಥಾನದಲ್ಲೆಲ್ಲಾ ವ್ಯಾಪಿಸಿಬಿಟ್ಟಿತು ! ಇಹಲೋಕ ವ್ಯಾಪಾರವನ್ನೇ ಮರೆತು ಕುಳಿತ ಸಭಿಕರಿಗೆ ತಿಮ್ಮಣ್ಣನು ವೀಣಾವಾದನವನ್ನು ಮುಗಿಸಿ ಗುರುಗಳಿಗೆ ನಮಸ್ಕರಿಸಿದಾಗಲೇ ಎಚ್ಚರ !
ಉತ್ತರಾದಿಸಂಗೀತಗಾರರೆಲ್ಲ ವೇದಿಕೆಯಿಂದಿಳಿದು ಬಂದು “ನಾವು ಜಿತರಾದೆವು' ಎಂದು ಶ್ರೀಗಳವರಿಗೆ ವಂದಿಸಿದರು. ಜನರು ಆನಂದತುಂದಿಲರಾಗಿ ವಿಜಯೀಂದ್ರರ ಜಯಕಾರ ಮಾಡಿದರು. ತಂಜಾಪುರಾಧೀಶ “ಗುರುದೇವ ! ತಮ್ಮಿಂದ, ತಮ್ಮ ಶಿಷ್ಯನಿಂದ ನಮ್ಮ ರಾಜ್ಯದ ಗೌರವಪ್ರತಿಷ್ಠೆಗಳು ಉಳಿದವು. ನಿಮಗೆ ಅನಂತ ವಂದನೆಗಳು” ಎಂದು ಗುರುಗಳಿಗೆ ನಮಿಸಿ, ಮುಂದುವರೆದು - “ನಾವು ಹಿಂದೆಂದೂ ಕೇಳರಿಯದ ಅಮರಗಾನದಿಂದ (ವೀಣಾವಾದನದಿಂದ) ನಮ್ಮನ್ನು ಕೃತಾರ್ಥರನ್ನಾಗಿ ಮಾಡಿದ ಈ ಬಾಲಕಲಾವಿದರನ್ನು ಗೌರವಿಸುವುದು ನಮ್ಮ ಕರ್ತವ್ಯ, ಸಾಕ್ಷಾತ್ ವೀಣಾಪಾಣಿಯನ್ನು ನೆನಪಿಗೆ ತರುವ ವಿದ್ವಾನ್ ತಿಮ್ಮಣ್ಣಾಚಾರ್ಯರಿಗೆ “ಬಾಲಸರಸ್ವತಿ” ಎಂಬ ಪ್ರಶಸ್ತಿಯನ್ನಿತ್ತು ಸನ್ಮಾನಿಸುತ್ತೇವೆ” ಎಂದು ಹೇಳಿ ಕರತಾಡನ, ಹರ್ಷಧ್ವನಿಗಳ ಮಧ್ಯೆ ಶಾಲುಜೋಡಿ, ಸುವರ್ಣಕಂಕಣ, ಪೀತಾಂಬರ, ಶಿರೋವೇಷ್ಟನ, ಸುವರ್ಣನಾಣ್ಯಗಳನ್ನು ತಿಮ್ಮಣ್ಣನಿಗೆ ಸಮರ್ಪಿಸಿ, ಹಾರ ಹಾಕಿ ಸನ್ಮಾನಿಸಿದನು. ಆನಂತರ ಉತ್ತರಾದಿಕಲಾವಿದರಿಗೂ ಶಾಲು-ಸಂಭಾವನೆಗಳನ್ನಿತ್ತು ಗೌರವಿಸಿದನು. ಸಕಲರೂ ಪರಮಾನಂದಭರಿತರಾದರು. ಹೀಗೆ ಅಂದಿನ ಸ್ಪರ್ಧೆಯು ತಂಜಾಪುರದ ಗೌರವರಕ್ಷಣೆಯಾಗಿ ಪರಿಣಮಿಸಿತು. ಸರ್ವರೂ ಗುರುವರ್ಯರು ಮತ್ತು ತಿಮ್ಮಣ್ಣನನ್ನು ಮುಕ್ತಕಂಠದಿಂದ ಕೊಂಡಾಡಿದರು.