ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೩೪. ಶ್ರೀವ್ಯಾಸರಾಜರು ರಾಜಗುರುಗಳಾದರು
ಶ್ರೀವ್ಯಾಸತೀರ್ಥರ ಪ್ರಥಮ ದರ್ಶನದಿಂದಲೇ ಸಾಳುವ ನರಸಿಂಹರಾಜನಿಗೆ ಅವರಲ್ಲಿ ಅನ್ಯಾದೃಶ ಭಕ್ತಿಶ್ರದ್ಧೆಗಳುಂಟಾದವು. ಇಂಥ ಗುರುಗಳನ್ನು ತನಗೆ ಕರುಣಿಸಿದ ಶ್ರೀಲಕ್ಷ್ಮೀನಾರಾಯಣಮುನಿಗಳ ಉಪಕಾರವನ್ನು ಮತ್ತೆ ಮತ್ತೆ ಸ್ಮರಿಸುತ್ತಾ ಶ್ರೀವ್ಯಾಸಮುನಿಗಳಿಗೆ ರಾಜಯೋಗ್ಯವಾದ ಎಲ್ಲಾ ಅನೂಕೂಲ ವೈಭವಗಳನ್ನು ಏರ್ಪಡಿಸಿಕೊಟ್ಟು ಅವರ ಅನುಗ್ರಹಕ್ಕೆ ಪಾತ್ರನಾದನು.
ಒಂದು ದಿನ ಅಭಿನವ ದೇವೇಂದ್ರನ 'ಸುಧರ್ಮ' ಸಭೆಯಂತೆ ಕಂಗೊಳಿಸುವ ಆ ರಾಜಸಭೆಯಲ್ಲಿ ದೇವಗುರು ಬೃಹಸ್ಪತ್ಯಾಚಾರ್ಯರೊಡನೆ ಶೋಭಿಸುವ ಇಂದ್ರದೇವನಂತೆ ಶ್ರೀವ್ಯಾಸಯತಿಸಾರ್ವಭೌಮರಿಂದೊಡಗೂಡಿ ನರಸಿಂಹಭೂಪಾಲನು ವಿರಾಜಿಸುತ್ತಿದ್ದನು.
ಆಗ ಶ್ರೀವ್ಯಾಸಯತಿಗಳಿಗೆ ಮಹಾರಾಜನು ಸಲ್ಲಿಸುತ್ತಿದ್ದ ಅಪಾರ ಗೌರವವನ್ನು ಸಹಿಸದೆ ಅಸೂಯಾಪರರಾದ, ಸ್ವವಿದ್ಯಾಹಂಕಾರದರ್ಪಿತರಾದ ಅನೇಕ ಭಟ್ಟರೇ ಮೊದಲಾದ ದುರ್ವಾದಿಗಳು ಶ್ರೀವ್ಯಾಸಭಗವಾನರನ್ನು ಸೋಲಿಸಲಿಚ್ಛಿಸಿ ಅಹಮಹಮಿಕೆಯು ತಾವಾಗಿ ಗುರುಗಳ ಜೊತೆಗೆ ವಾದಕ್ಕೆ ಸಿದ್ದರಾಗಿ ತಮ್ಮ ವಾದಕೌಶಲದ ಬಡಾಯಿ ಕೊಚ್ಚಲಾರಂಭಿಸಿದರು.
ಮಣಿಕಾರನ ಪದ್ಧತಿಯಂತೆ ನ್ಯಾಯಶಾಸ್ತ್ರ, ಮತ್ತಿತರ ಶಾಸ್ತ್ರಗಳಲ್ಲಿ ವಾದ ಪ್ರಾರಂಭವಾಯಿತು. ವಾದ-ಪ್ರತಿವಾದಗಳು ಹತ್ತೆಂಟು ದಿನಗಳವರೆಗೆ ಭರದಿಂದ ಜರುಗಿದವು. ಶ್ರೀವ್ಯಾಸಯತೀಂದ್ರರು ತಮ್ಮ ಪ್ರಕಾಂಡ ಪಾಂಡಿತ್ಯ, ವಾದವೈಖರಿ, ಯುಕ್ತಿಪರಂಪರೆ-ಪ್ರತಿಭೆಗಳ ಕೋಲಾಹಲಗಳಿಂದ ಸಕಲ ದುರ್ವಾದಿಗಳನ್ನು ನಿಗ್ರಹಿಸಿ ಸುಲಭವಾಗಿ ಜಯಗಳಿಸಿದರು.
ಶ್ರೀವ್ಯಾಸರಾಜರ ವಾದಚಾತುರ್ಯವನ್ನು ಕಂಡು ವಿಸ್ಮಯಾನಂದಭರಿತರಾಗಿ ನರಸಿಂಹರಾಜನು “ಈ ವ್ಯಾಸರಾಜ ಗುರುವರ್ಯರು ಸಾಮಾನ್ಯರಲ್ಲ; ನಾಲ್ಕು ಮುಖಗಳಲ್ಲಿ ಮೂರನ್ನು ಮರೆಮಾಡಿ ಒಂದೇ ಮುಖದಿಂದ ಸತ್ಯಲೋಕದಿಂದ ಧರೆಗುದಿಸಿ ಬಂದ ವಾಗ್ಗೇವಿಯ ಪ್ರೇಮಕಲಾರಸಜ್ಞರಾದ ಸಾಕ್ಷಾತ್ ಬ್ರಹ್ಮದೇವರೇ ಇವರು” ಎಂದು ನಿಶ್ಚಯಿಸಿದನು.
ಸಾಳುವ ನರಸಿಂಹಭೂಪಾಲನು ಸಮಸ್ತ ಸಭೆಯ ಜಯಜಯಕಾರ ಮಾಡುತ್ತಿರಲು ಸಕಲ ವೈಭವದಿಂದ ಶ್ರೀವ್ಯಾಸರಾಜ ಗುರುಸಾರ್ವಭೌಮರನ್ನು ತನ್ನ ರತ್ನಸಿಂಹಾಸನದಲ್ಲಿ ಕೂಡಿಸಿ “ರಾಜಗುರುಗಳೆಂದು ಅವರಿಗೆ ಪಟ್ಟಾಭಿಷೇಕ ಮಾಡಿ ರಾಜಗುರುತ್ವ ದ್ಯೋತಕವಾಗಿ ಛತ್ರ, ಚಾಮರ, ಚೌರಿ, ಆಂದೋಲಿಕಾ, ಗಜ-ತುರಗವಾಹನ, ಸೈನಿಕರು, ಮಂಗಳವಾದ್ಯ, ತಾಳಸ್ತುತಿಪಾಠಕರು, ವೀಣಾದಿ ವಾದ್ಯಗಳು, ಅಮೂಲ್ಯ ಪೀತಾಂಬರ, ವಸ್ತ್ರ, ಶಹಲು, ನವರತ್ನಖಚಿತವಾದ ಆಭರಣಗಳು, ಸುವರ್ಣಮಯ ಪಾತ್ರೆಗಳು, ಅತಿಥಿಪೂಜಾದಿ ಸತ್ಕಾರ ನಿರತರಾದ ಪ್ರೋತ್ರೀಯರಿಂದ ಕೂಡಿದ ಅಗ್ರಹಾರಗಳು, ಭೂಸ್ವಾಸ್ತಿಗಳು, ಮತ್ತಿತರ ಅಪೂರ್ವ ವಸ್ತುಗಳನ್ನು ಸಮರ್ಪಿಸಿ ನಮಸ್ಕರಿಸಿದನು.
ಶ್ರೀವ್ಯಾಸರಾಜರು ಮಹಾರಾಜನ ಗುರುಭಕ್ತಿ, ಔದಾರ್ಯಾದಿ ಸದ್ಗುಣಗಳನ್ನು ಶ್ಲಾಘಿಸಿ ಫಲಮಂತ್ರಾಕ್ಷತೆಯನ್ನು ಅನುಗ್ರಹಿಸಿ, ಆಶೀರ್ವದಿಸಿ ರಾಜವೈಭವದೊಡನೆ ತಮ್ಮ ಮಠಕ್ಕೆ ದಿಗ್ವಿಜಯ ಮಾಡಿದರು.
ಇಂತು ಅನೇಕ ಪ್ರತಿವಾದಿಗಳನ್ನು ಜಯಿಸಿ, ರಾಜಗುರುಗಳೆಂದು ನರಸಿಂಹ ಮಹೀಪತಿಯಿಂದ ಸೇವರಾಗಿ ಸಕಲ ಧರ್ಮಮಾರ್ಗವನ್ನು ಸಂಸ್ಥಾಪಿಸಿ ಶ್ರೀವ್ಯಾಸತೀರ್ಥರು ರಾಜಧಾನಿಯಲ್ಲಿ ಬಹುವರ್ಷಗಳ ಕಾಲ ವಾಸಮಾಡಿದರು. ಶ್ರೀವ್ಯಾಸರಾಜರ ಕೀರ್ತಿಯು ದಶದಿಕ್ಕುಗಳನ್ನೂ ವ್ಯಾಪಿಸಿತು.
ಹೀಗೆ ಕೆಲಕಾಲ ಕಳೆಯಿತು. ಒಂದು ದಿನ ಸಾಳುವ ನರಸಿಂಹ ವ್ಯಾಸರಾಜರಲ್ಲಿ ಕನ್ನಡನಾಡಿನ ಪರಿಸ್ಥಿತಿ, ಸಾಮ್ರಾಟನಾದ ವಿರೂಪಾಕ್ಷನಿಗೆ ಸಾಮ್ರಾಜ್ಯದ ಬಗ್ಗೆ ಇರುವ ಅನಾಸಕ್ತಿ, ಹೇಡಿಯೂ, ವಿಲಾಸಪ್ರಿಯನೂ, ಪ್ರಜಾಹಿಂಸಕನೂ ಆದ ಅವನ ದೌರ್ಬಲ್ಯಗಳನ್ನು ಕಂಡು ವಿಧರ್ಮಿಯರೂ ಸಾಮ್ರಾಜ್ಯದ ಶತ್ರುಗಳೂ ಆದ ಬಹಮನಿ ಸುಲ್ತಾನರು, ಭಾರತೀಯರೇ ಆದರೂ ನೆರೆಹೊರೆಯ ಹಿಂದೂರಾಜರು ಅಂತರಂಗದಲ್ಲಿ ಕನ್ನಡನಾಡಿನ ಅಭ್ಯುದಯವನ್ನು ಸಹಿಸದೆ ಶತ್ರುರಾಜರ ಜೊತೆ ಸೇರಿ ಆಗಾಗ್ಗೆ ನಾಡಿನ ಎಲ್ಲೆಗಳ ಒಳ-ಹೊರಗೆ ಮಾಡುತ್ತಿರುವ ಧಾಳಿ, ಕೊಲೆ, ಸುಲಿಗೆ, ಹಿಂದೂಧರ್ಮ-ಗುಡಿಗುಂಡಾರಗಳ ಮೇಲಾಗುತ್ತಿರುವ ದಬ್ಬಾಳಿಕೆ, ಪ್ರಜಾಹಿಂಸೆ - ಮುಂತಾದ ವಿಚಾರಗಳನ್ನು ವಿವರಿಸಿ, ಈವೊಂದು ಸಂದರ್ಭದಲ್ಲಿ ಕನ್ನಡ ಸಾಮ್ರಾಜ್ಯದ ಕಾರ್ಯಕರ್ತನಾಗಿರುವ ನನಗೆ ಕರ್ತವ್ಯವನ್ನು ಬೋಧಿಸಿ ಕನ್ನಡನಾಡು ಮಾತ್ರವಲ್ಲದೆ ದಕ್ಷಿಣಭಾರತದ ಹಿತಚಿಂತನೆ, ಶಾಂತಿಸ್ಥಾಪನೆ, ಪ್ರಜಾಸಂರಕ್ಷಣೆಗಳಿಗೆ ಮಾರ್ಗದರ್ಶನವನ್ನು ಮಾಡಿ ಅನುಗ್ರಹಿಸಬೇಕೆಂದು ಪ್ರಾರ್ಥಿಸಿದನು.
ಸ್ವಲ್ಪಕಾಲ ಮನದಲ್ಲಿಯೇ ಎಲ್ಲಾ ವಿಚಾರಗಳನ್ನೂ ಯೋಚಿಸಿ, ಆನಂತರ ಶ್ರೀವ್ಯಾಸರಾಜರು ಹೀಗೆ ಉಪದೇಶಿಸಿದರು - “ರಾಜನ್, ನಮ್ಮ ಭರತವರ್ಷ ಪುಣ್ಯಭೂಮಿ. ಇದು ಮೊದಲಿನಿಂದಲೂ ಜಗತ್ತಿಗೆ ಜ್ಞಾನದಾನ ಮಾಡಿ ಧರ್ಮ-ಸದಾಚಾರ, ಪರಾಕ್ರಮ, ವಿವಿಧ ವಿದ್ಯೆ, ಕಲೆ, ನಾಗರೀಕತೆಗಳನ್ನು ಉಪದೇಶಿಸುತ್ತಾ ಬಂದಿರುವ ಭವ್ಯದೇಶ, ಭಾರತದ ವಿದ್ಯೆ, ಧರ್ಮ, ಸಂಸತಿ, ಭವ್ಯಪರಂಪರೆಗೆ ಹಿಂದಿನಿಂದಲೂ ಕನ್ನಡ ಕಲಿಗಳು ಅಪಾರ ಕೊಡುಗೆ ನೀಡಿದ್ದಾರೆ. ಅದರ ರಕ್ಷಣೆಗಾಗಿ ಹೋರಾಡಿದ್ದಾರೆ. ಚಾಲುಕ್ಯ, ರಾಷ್ಟ್ರಕೂಟ, ಕದಂಬ, ದೇವಗಿರಿಯ ಸಾಮ್ರಾಟರು ನಮಗೆ ಮಾರ್ಗದರ್ಶಕರಾಗಿದ್ದಾರೆ. ಶ್ರೀವಿದ್ಯಾರಣ್ಯಮುನಿಗಳು ಈ ವಿಜಯನಗರದ ಕನ್ನಡ ಸಾಮ್ರಾಜ್ಯವನ್ನು ಸ್ಥಾಪಿಸಿದ ಉದ್ದೇಶವೂ ಭಾರತೀಯ ತತ್ವ, ಧರ್ಮ, ಸಂಸ ತಿಗಳ, ಹಿಂದೂ ಜನತೆಯ, ಮುಖ್ಯವಾಗಿ ಕನ್ನಡ ಜನತೆಯ ಸಂರಕ್ಷಣೆ, ಅಭ್ಯುದಯಗಳಿಗೆಂಬುದು ಸ್ಪಷ್ಟವಾಗಿದೆ. ಭಾರತದ ಹಿಂದೂ ಸಂಸ ತಿ, ಸನಾತನ ಧರ್ಮ, ವೇದಮತಗಳ, ನಮ್ಮ ಭವ್ಯಪರಂಪರೆಯ ಅಳಿವು-ಉಳಿವುಗಳೆಂದು ಕನ್ನಡ ಸಾಮ್ರಾಜ್ಯವನ್ನೇ ಅವಲಂಬಿಸಿದೆ. ಹಿಂದಿನಿಂದಲೂ ಈವೊಂದು ಮಹತ್ವಪೂರ್ಣ ಕಾರ್ಯವನ್ನು ನಮ್ಮವರು ಶ್ರದ್ಧೆಯಿಂದ ನೆರವೇರಿಸುತ್ತಾ ಬಂದಿರುವುದಲ್ಲದೆ, ಸರ್ವಪ್ರಜರ ಸುಖ-ಸಂತೋಷಗಳಿಗಾಗಿಯೇ ಶ್ರಮಿಸಿರುವುದರಿಂದ ಇಂದು ಕನ್ನಡ ಸಾಮ್ರಾಜ್ಯದ ಎಲ್ಲ ಸ್ವಾಮಿನಿಷ್ಠ ಸೇವಕರೂ ಹಿಂದಿನವರು ಹಾಕಿಕೊಟ್ಟಿರುವ ದಾರಿಯಲ್ಲೇ ಮುಂದುವರೆಯುವುದು ಅತ್ಯವಶ್ಯವಾಗಿದೆ. ಈ ಕಾರ್ಯ ಯಶಸ್ವಿಯಾಗಬೇಕಾದರೆ ಮೊದಲು ಪ್ರಜರಲ್ಲಿ ಸುಖ-ಸಂತೋಷ-ನೆಮ್ಮದಿಗಳುಂಟಾಗಬೇಕು. ನಾಡಿನಲ್ಲಿ ಶತ್ರುಗಳ ಚುಂಚು ಪ್ರವೇಶವಾಗದಂತೆ ನೋಡಿಕೊಳ್ಳಬೇಕು. ದೇವರು-ಧರ್ಮಗಳಲ್ಲಿ ನಂಬಿಕೆಯನ್ನು ಸರ್ವರಲ್ಲೂ ಒಡಮೂಡಿಸಬೇಕು. ಇದಕ್ಕೆ ಅನುಕೂಲರಾದ ದಕ್ಷಿಣಭಾರತದ ಎಲ್ಲ ಹಿಂದೂಧರ್ಮಾಭಿಮಾನಿ ರಾಜ-ಮಹಾರಾಜರೊಡನೆ ಹಾರ್ದಿಕ-ಸೌಹಾರ್ದ ಸಂಬಂಧವನ್ನು ಬಲಪಡಿಸಬೇಕು. ದಕ್ಷಿಣಭಾರತದ ಮಿತ್ರರಾಜರು, ಸಾಮಂತರು ಮತ್ತು ಪ್ರಜೆಗಳಿಗೆ ನಮ್ಮ ಸಾಮ್ರಾಜ್ಯವು ಅಖಂಡ ಭಾರತದ ಆದರ್ಶ, ಧರ್ಮ, ಸತ್ಪರಂಪರೆಗಳ ರಕ್ಷಣೆಗಾಗಿ ದೀಕ್ಷಾಬದ್ಧವಾಗಿದೆ ಎಂಬುದನ್ನು ತೋರಿಕೊಟ್ಟು ಅವರೆಲ್ಲರ ಪ್ರೀತಿ-ವಿಶ್ವಾಸ, ಬೆಂಬಲಗಳನ್ನು ಗಳಿಸಬೇಕು.
ಭೂಪಾಲ! ನಮ್ಮದು ಹಿಂದೂರಾಷ್ಟ್ರ. ಇಲ್ಲಿ ವಿವಿಧ ತತ್ವ, ಧರ್ಮ, ಸಂಸ ತಿ, ಮತ, ಪಂಥ, ದೇವತೆಗಳನ್ನು ಉಪಾಸಿಸುವ ಜನರಿದ್ದಾರೆ. ಅವರೆಲ್ಲರೂ ಸಾಮ್ರಾಜ್ಯದ ಪ್ರಜೆಗಳೇ ಆಗಿರುವುದರಿಂದ ಎಲ್ಲರನ್ನೂ ಸಮಾನ ಗೌರವ-ವಿಶ್ವಾಸಗಳಿಂದ ಪಾಲಿಸಿಕೊಂಡು ಬಂದು ಪ್ರೋತ್ಸಾಹಿಸಬೇಕು. ಅವರಲ್ಲಿ ನಂಬಿಕೆ ಹುಟ್ಟುವಂತೆ ಮಾಡಬೇಕು. ಪ್ರಜರ ಆಶೋತ್ತರಗಳನ್ನು ನೆರವೇರಿಸಿ “ಸರ್ವೆಜನಾಸ್ಸುಖಿನೋ ಭವಂತು” ಎಂಬ ವೈದಿಕೋಪದೇಶವನ್ನು ಜಾರಿಗೆ ತರಬೇಕು. ಜೊತೆಗೆ ವೈದಿಕ ಸವೈಷ್ಣವ ಸಿದ್ಧಾಂತ. ಭಾಗವತಧರ್ಮಗಳು ಪ್ರಸಾರ ಮಾಡಬೇಕು. ಇಷ್ಟಾದರೆ ಸಾಲದು. ನಮ್ಮ ನಾಡಿನ ಜನತೆಗೆ, ಧರ್ಮಕ್ಕೆ, ಗುಡಿಗುಂಡಾರಗಳಿಗೆ ಹಾನಿ ಮಾಡುವವರು ಅವರು ಯಾರೇ ಆಗಿರಲಿ, ಅಂಥವರನ್ನು ದಂಡಿಸಿ, ಪುಂಡತನದಿಂದ ಬಂಡೆದ್ದು ತೊಂದರೆ ಕೊಡುವವರನ್ನು ಬಗ್ಗು ಬಡಿದು, ನಾಡಿನ ಎಲ್ಲೆಗಳನ್ನು ರಕ್ಷಿಸಿ, ಬಿಟ್ಟುಹೋಗಿರುವ ಪ್ರದೇಶಗಳನ್ನು ಮತ್ತೆ ಸಂಪಾದಿಸಿ ಸುಭದ್ರಪಡಿಸಬೇಕು. ನಮ್ಮ ನಾಡು, ಮಾಂಡಲಿಕರ ರಾಜ್ಯ, ದಕ್ಷಿಣದ ಇತರ ಮಿತ್ರರಾಜ್ಯಗಳಲ್ಲಿ ದೇವಾಲಯ ಧರ್ಮ, ತಿಗಳ ಮೇಲೆ ದಾಳಿ ಮಾಡಿ ಮತ್ತು ಪ್ರಜರಿಗೆ ಹಿಂಸೆ ಕೊಡುವ ವಿಧರ್ಮಿಯ ಶತ್ರುಗಳನ್ನು ಜಯಿಸಿ ಎಲ್ಲೆಡೆ ಶಾಂತಿ-ಸಮಾಧಾನಗಳನ್ನುಂಟುಮಾಡಬೇಕು. ಇದೊಂದು ಮಹತ್ವಪೂರ್ಣವಾದ ಕಾರ್ಯ! ಇದು ಯಶಸ್ವಿಯಾದಲ್ಲಿ ಅಖಂಡಭಾರತದಲ್ಲಿ ಕನ್ನಡ ಸಾಮ್ರಾಜ್ಯವು ಅತ್ಯಂತ ಬಲಾಢವಾದ ಏಕೈಕ ಸಾಮ್ರಾಜ್ಯವಾಗುಳಿದು, ಹಿಂದೂಧರ್ಮತ್ರಾಣಪರಾಯಣ ಸಾಮ್ರಾಜ್ಯವೆನಿಸಿ ಕೀರ್ತಿ ಗಳಿಸುವುದು.
ಮಹಾರಾಜ, ಇದನ್ನು ಯಶಸ್ವಿಯಾಗಿ ನಿರ್ವಹಿಸಲು ಬೇಕಾದ ಸಮಸ್ತ ಗುಣಗಳು, ಅರ್ಹತೆಯೂ ನಿನಗಿದೆ. ಶ್ರೀನಿವಾಸ-ವಿರೂಪಾಕ್ಷರ ನಿಮ್ ಭಕ್ತನೂ, ಮಹಾಪರಾಕ್ರಮಿಯೂ, ಚಾಣಾಕ್ಷನೂ, ಸದ್ಗುಣಿಯೂ, ದೇವ-ಗುರು- ದ್ವಿಜಪೂಜಕನೂ, ಸರ್ವರ ಹಿತಚಿಂತನಕನೂ, ಮುಖ್ಯವಾಗಿ ಕನ್ನಡ ಸಾಮ್ರಾಜ್ಯ ಧುರಂಧರನೂ ಆಗಿರುವ ನೀನು ಈ ಮಹತ್ಕಾರ್ಯವನ್ನು ನೆರವೇರಿಸಲು ಪ್ರತಿಜ್ಞಾಬದ್ಧನಾಗು! ನಿನಗೆ ಭಗವಂತನ ಅನುಗ್ರಹವಿದೆ. ನಮ್ಮ ಬೆಂಬಲ-ಆಶೀರ್ವಾದಗಳಂತೂ ಸರ್ವದಾ ಇದೆ. ನೀನು ಈ ಕಾರ್ಯದಲ್ಲಿ ಜಯಶೀಲನಾಗುವುದರಲ್ಲಿ ಸಂದೇಹವಿಲ್ಲ.
ರಾಜೇಂದ್ರ! ನಾವು ಹೇಳಿದ ವಿಚಾರಗಳನ್ನು ಸಾವಧಾನವಾಗಿ ಆಲೋಚಿಸಿ, ಸಾಮ್ರಾಜ್ಯನಿಷ್ಠರೂ, ನಿನ್ನ ಮಿತ್ರರೂ, ಹಿತೈಷಿಗಳೂ ಆದ ಎಲ್ಲ ಸಚಿವ-ರಾಜನ್ಯ-ಪುರಪ್ರಮುಖರೊಡನೆ ವಿಚಾರವಿನಿಮಯ ಮಾಡಿ ಎಲ್ಲರ ಬೆಂಬಲ ಪಡೆದು ಕಾರ್ಯಪ್ರವೃತ್ತನಾಗು. ಹಿಂದೂಧರ್ಮ-ಸಂಸ ತಿ, ಪ್ರಜಾಸಂರಕ್ಷಣೆಗಳಿಗಾಗಿ ಮೊದಲು ದಕ್ಷಿಣಭಾರತದಲ್ಲಿ “ಧರ್ಮದಿಗ್ವಿಜಯ”- ಯಾತ್ರೆಯನ್ನು ಕೈಕೊಂಡು ಹೊರಡು. ನಾವು ಸರ್ವಸಂಗಪರಿತ್ಯಾಗ ಮಾಡಿದ ಸನ್ಯಾಸಿಗಳಾದರೂ ಕನ್ನಡ ಸಾಮ್ರಾಜ್ಯದ ಹಿಂದೂಧರ್ಮ-ಸಂಸ ತಿಗಳ ಕಲ್ಯಾಣದ ದೃಷ್ಟಿಯಿಂದ ನಾವೂ ನಿನ್ನೊಡನೆ ಬಂದು ಮಾರ್ಗದರ್ಶನ ಮಾಡುವೆವು! ಈ ಮಹಾಪ್ರಯತ್ನಕ್ಕೆ ಭಗವಂತನು ಯಶಸ್ಸು, ಸತ್ಪಲಗಳನ್ನು ಅನುಗ್ರಹಿಸುವನೆಂದು ನಾವು ನಂಬಿದ್ದೇವೆ. ರಾಜನ್, ಕನ್ನಡ ಸಾಮ್ರಾಜ್ಯದ ಹಿತಸಾಧಿಸಿ ಕೀರ್ತಿಶಾಲಿಯಾಗು!”
ಶ್ರೀಪಾದಂಗಳವರ ಹಿತೋಕ್ತಿ-ಅಭಯವಚನಗಳಿಂದ ನರಸಿಂಹ ಭೂಪಾಲ ರೋಮಾಂಚಿತನಾದ. ಶ್ರೀಯವರ ಉಪದೇಶ ಅವನಿಗೆ ಅಮೃತಪ್ರಾಶನ ಮಾಡಿದಂತಾಯಿತು. ಒಂದು ಬಗೆಯ ನೂತನೋತ್ಸಾಹ ಉಂಟಾಯಿತು. ಆದುದರಿಂದ ಗುರುಗಳಿಗೆ ನಮಸ್ಕರಿಸಿ, ಕೃತಜ್ಞತೆಯನ್ನು ಸಮರ್ಪಿಸಿ ಶ್ರೀಯವರ ಉಪದೇಶದಂತೆ ವರ್ತಿಸುವುದಾಗಿ ವಿಜ್ಞಾಪಿಸಿ ಈ ವಿಚಾರವನ್ನು ಆಪ್ತಷರೊಡನೆ ವಿಚಾರವಿನಿಮಯ ಮಾಡಲು ಗುರುಗಳ ಅಪ್ಪಣೆ ಪಡೆದು ತೆರಳಿದನು.
ಒಂದು ಶುಭ ಮುಹೂರ್ತದಲ್ಲಿ ಶ್ರೀವ್ಯಾಸತೀರ್ಥರೊಡನೆ ತಿರುಪತಿಗೆ ತೆರಳಿ ಶ್ರೀನಿವಾಸದೇವರಿಗೆ ಸೇವೆ ಸಲ್ಲಿಸಿ, ಮನೋಭೀಷ್ಟವನ್ನು ಪೂರ್ಣಮಾಡುವಂತೆ ಪ್ರಾರ್ಥಿಸಿ ಚಂದ್ರಗಿರಿಗೆ ಬಂದು ಅಲ್ಲಿಂದ ಗುರುಗಳೊಡನೆ ದಕ್ಷಿಣಭಾರತದ ದಿಗ್ವಿಜಯವನ್ನು ಕೈಗೊಂಡು ಹೊರಟನು.
ಕ್ರಿ.ಶ. ೧೪೭೬ ರಿಂದ ೧೪೮೨ ರವರೆಗೆ ಸಾಳುವ ನರಸಿಂಹ ಭೂಪಾಲನು "ರಾಜಗುರು” ಶ್ರೀವ್ಯಾಸಗುರುಗಳೊಡನೆ ಅನೇಕ ಬಾರಿ ಕನ್ನಡ ಸಾಮ್ರಾಜ್ಯ, ದಕ್ಷಿಣಭಾರತದ ಇತರ ಪ್ರಾಂತ್ಯಗಳಲ್ಲೆಲ್ಲಾ ಸಂಚರಿಸಿ, ದಂಗೆಕೋರರ ಹುಟ್ಟಡಗಿಸಿ, ಶತ್ರುರಾಜರನ್ನು ಸಂಪೂರ್ಣವಾಗಿ ಪರಾಜಯಗೊಳಿಸಿ, ಕನ್ನಡನಾಡಿನ ಎಲ್ಲೆಗಳನ್ನು ಭದ್ರಪಡಿಸಿ, ಕೈಬಿಟ್ಟುಹೋಗಿದ್ದ ಪ್ರಾಂತ್ಯಗಳನ್ನು ಮತ್ತೆ ವಶಪಡಿಸಿಕೊಂಡು, ವಿಸ್ತರಿಸಿ, ಎಲ್ಲ ಕಡೆ ಪ್ರಜೆಗಳಿಗೆ ಬಂದಿದ್ದ ಸಂಕಟಗಳನ್ನೂ ಪರಿಹರಿಸಿ, ಶಾಂತಿ, ಸಮಾಧಾನ, ತೃಪ್ತಿಗಳನ್ನುಂಟುಮಾಡಿ, ಪ್ರಜೆಗಳ ಪ್ರೀತಿ, ವಿಶ್ವಾಸ, ನಂಬಿಕೆಗಳನ್ನು ಗಳಿಸಿ, ಶತ್ರುಗಳಿಗೆ ಯಮಸದೃಶನೆನಿಸಿ, ಸ್ನೇಹಿತರಿಗೆ ಮನೋಲ್ಲಾಸಕರನಾಗಿ, ತೀರ್ಥಕ್ಷೇತ್ರ ದರ್ಶನ, ದೇವಾಲಯಗಳ ಜೀರ್ಣೋದ್ದಾರ ಮಾಡಿ, ಎಲ್ಲ ದೇವಾಲಯ, ಮಠ-ಮಂದಿರ, ಛತ್ರಗಳಲ್ಲಿ ಸಕ್ರಮವಾಗಿ ಪೂಜಾಪುರಸ್ಕಾರಗಲು ನೆರವೇರುವಂತೆ ಮಾಡಿ, ಅವುಗಳಿಗೆ ಗ್ರಾಮ, ಭೂಮಿ, ಧನಕನಕಾಭರಣ, ತಸ್ವೀಕುಗಳನ್ನೂ, ದತ್ತಿಗಳನ್ನೂ ಏರ್ಪಡಿಸಿಕೊಟ್ಟು, ಹಿಂದೂ ದೇವಾಲಯ-ಧರ್ಮಗಳ ಮೇಲಾದ ಧಾಳಿಗಳನ್ನು ಎದುರಿಸಿ, ಶತ್ರುಗಳನ್ನು ಹೊಡೆದೋಡಿಸಿ, ಪ್ರಜೆಗಳಿಗೆ ಅವಶ್ಯಕವಾದ ಕೆರೆ, ಕುಂಟೆ, ರಸ್ತೆ ಮುಂತಾದ ಅನುಕೂಲಗಳನ್ನು ಏರ್ಪಡಿಸಿಕೊಟ್ಟು, ದಕ್ಷಿಣಭಾರತದಲ್ಲಿ ಮುಖ್ಯವಾಗಿ ಕನ್ನಡ ಸಾಮ್ರಾಜ್ಯದಲ್ಲಿ ನೂತನೋತ್ಸಾಹ, ಸಂತೋಷ, ಸಮಾಧಾನಗಳಿಂದ ಪ್ರಜರು ಜೀವಿಸುವಂತೆ ಮಾಡಿ, ಭಾರತೀಯ ಧರ್ಮ, ಸಂಸತಿ, ವಿದ್ಯೆ, ಕಲೆ, ಭವ್ಯಪರಂಪರೆಯ ಆಶ್ರಯವಿತ್ತು ರಕ್ಷಿಸುವ ಏಕೈಕ ಸಾಮ್ರಾಜ್ಯವೆಂದು ಕನ್ನಡ ಸಾಮ್ರಾಜ್ಯದ ಕೀರ್ತಿ ಬೆಳಗುವಂತೆ ಮಾಡಿ ಸರ್ವರ ಗೌರವಾದರಗಳಿಗೆ ಪಾತ್ರನಾದನು.
ಈ ಮಹತ್ಕಾರ್ಯದಲ್ಲಿ ಶ್ರೀವ್ಯಾಸಭಗವಾನರು ನರಸಿಂಹರಾಜನ ಜೊತೆಗಿದ್ದು ಮಾರ್ಗದರ್ಶನ ಮಾಡಿ ಸಮಸ್ತ ಪ್ರಜರಲ್ಲಿ ಕನ್ನಡ ಸಾಮ್ರಾಜ್ಯ ಹಾಗೂ ನರಸಿಂಹ ಭೂಪಾಲನಲ್ಲಿ ಸರ್ವರ ನಂಬಿಕೆಯು ಮತ್ತಷ್ಟು ದೃಢವಾಗುವಂತೆ ಮಾಡಿ ಅನುಗ್ರಹಿಸಿದರು. ಶ್ರೀವ್ಯಾಸರಾಜ ಗುರುಸಾರ್ವಭೌಮರ ತಪಃಪ್ರಭಾವ, ಅನುಗ್ರಹಾಶೀರ್ವಾದಗಳಿಂದ ಸಾಳುವ ನರಸಿಂಹ ಭೂಪಾಲನು ಅಸಾಧ್ಯವಾದುದನ್ನು ಸಾಧಿಸಿ ದಕ್ಷಿಣಭಾರತದಲ್ಲೇ ಅತ್ಯಂತ ಬಲಾಢ ವ್ಯಕ್ತಿ ಎನಿಸಿದನು. ಮಾತ್ರವಲ್ಲ ಅಖಂಡಭಾರತದಲ್ಲೇ ಹಿಂದೂಧರ್ಮ ರಕ್ಷಕ, ಅರಿಭಯಂಕರ, ಪ್ರಜಾರಂಜಕ ಎಂಬ ಕೀರ್ತಿ-ಪ್ರತಿಷ್ಠೆಗಳಿಗೆ ಪಾತ್ರನಾದನು. ಈ ಧಾರ್ಮಿಕ ದಿಗ್ವಿಜಯದಲ್ಲಿ ನರಸಿಂಹ ಭೂಪಾಲನಿಗೆ ಕನ್ನಡ ಸಾಮ್ರಾಜ್ಯದ ಅಜೇಯಸೇನೆ, ಅವನ ಆಪ್ತಮಿತ್ರರೂ, ಹಿತೈಷಿಗಳೂ, ಪರಾಕ್ರಮಿಗಳೂ ಆದ ಸಚಿವ-ಸೇನಾಧಿಪತಿಗಳೂ ನಿಷ್ಠೆಯಿಂದ ಸೇವೆ ಸಲ್ಲಿಸಿದರು.
ನರಸಿಂಹರಾಜನ ಸಾಧನೆಗಳು ಅನೇಕ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ನಿರೂಪಿಸಬಯಸುತ್ತೇವೆ.
ಕಳಿಂಗಭೂಪತಿಯು ಹಿಂದೂವಾಗಿದ್ದರೂ, ಕನ್ನಡ ಸಾಮ್ರಾಜ್ಯ ವಿರುದ್ಧವಾಗಿ ವಿಧರ್ಮಿಯರಾದ ಮುಸಲ್ಮಾನರೊಡನೆ ಸೇರಿ, ಕನ್ನಡನಾಡಿನ ಎಲ್ಲೆಗಳಲ್ಲಿ ಧಾಳಿ ಮಾಡಿ ಕೊಲೆ, ಸುಲಿಗೆಗಳಿಂದ ಪ್ರಜರಿಗೆ ತೊಂದರೆ ಕೊಡುತ್ತಿರಲು ಅಗಾಧ ಸೈನ್ಯದೊಡನೆ ಹೊರಟು ಕಳಿಂಗ ಭೂಪತಿಯನ್ನು ರಾಜ್ಯದ ಎಲ್ಲೆಯಿಂದ ಓಡಿಸಿದ್ದಲ್ಲದೆ ಅವನ ಬೆನ್ನಟ್ಟಿ ಕಳಿಂಗ ರಾಜ್ಯಕ್ಕೂ ಹೋಗಿ ಅವನನ್ನು ಸಂಪೂರ್ಣವಾಗಿ ಜಯಿಸಿದನು. ಶರಣಾಗತನಾದ ಅವನನ್ನು ಕ್ಷಮಿಸಿ ಅವನ ರಾಜ್ಯವನ್ನು ಮತ್ತೆ ಅವನಿಗೆ ಹಿಂದಿರುಗಿಸಿದನು. ಕಪ್ಪ-ಕಾಣಿಕೆಗಳನ್ನು ಪಡೆದು ಪುನಃ ತೊಂದರೆ ಕೊಡದಿರಲೆಂದು ಅಲ್ಲಿ ನರಸನಾಯಕನನ್ನು ಸೈನ್ಯದೊಡನಿಟ್ಟು ಚಂದ್ರಗಿರಿಗೆ ಹಿಂದಿರುಗಿ ವಿಶ್ರಾಂತಿ ಪಡೆದನು. (After dictating terms of peace to the king of Orrissa, Narasimha returned abviously to Chandragiri". - "A Little known chapter of Vijayanagaram History" P. 35
ಚೋಳಮಂಡಲದ ಅಧಿಪತಿಯಾದ ಕೋನೇಟಿ(ರಿ)ರಾಜನು ದುರಹಂಕಾರಿಯೂ, ಪ್ರಜಾಪೀಡಕನೂ ಆಗಿ ಉನ್ಮತ್ತನಾಗಿ ಶ್ರೀರಂಗವೈಷ್ಣವರನ್ನು, ತನ್ನ ಪ್ರಜೆಗಳನ್ನೂ ಹಿಂಸಿಸುತ್ತಾ, ಕನ್ನಡ ಸಾಮ್ರಾಜ್ಯಕ್ಕೆ ವಿರುದ್ಧವಾಗಿ ವರ್ತಿಸುತ್ತಾ ತೊಂದರೆ ಕೊಡುತ್ತಿದ್ದನು. ಸಾಮ, ದಾನ, ಭೇದಗಳಿಗೂ ಬಗ್ಗದಿದ್ದುದರಿಂದ ಯಾವನು ತನ್ನ ಜನರನ್ನೂ, ದೇಶವನ್ನೂ ಪರಕೀಯ ವಸ್ತುವಂತೆ ಕಾಣುವನೋ ಪ್ರಜಾಪೀಡಕನಾದ ಅಂಥ ರಾಜನನ್ನು ದುಡಿಸುವುದು ಯುಕ್ತವೆಂದರಿತು, ನರಸಿಂಹ ಭೂಪಾಲ-ನರಸನಾಯಕರು ತೀರ್ಮಾನಿಸಿದರು. ಅದರಂತೆ ಕಳಿಂಗದಲ್ಲಿದ್ದ ಸೇನೆಯೊಡನೆ ನರಸನಾಯಕನೂ ಚಂದ್ರಗಿರಿಯಿಂದ ನರಸಿಂಹ ಭೂಪಾಲರೂ ದೊಡ್ಡ ಸೇನೆಯೊಡನೆ ಚೋಳರಾಜನಾದ ಕೊನ್ನೇಟಿ ರಾಜನನ್ನು ಆಕ್ರಮಿಸಿದರು. ಗಜಬಲದೊಡನೆ ತಮ್ಮ ಮೇಲೆ ಕ್ರೋಧದಿಂದ ಎರಗಿದ ಕೊನ್ನೇಟಿ ರಾಜನೊಡನೆ ಹೋರಾಡಿದರು. ಯುದ್ಧದಲ್ಲಿ ಪರಾಜಿತನಾದ ಚೋಳಭೂಪನು ರಾಜ್ಯಕೋಶ ಸ್ವಜನರೆಲ್ಲರನ್ನೂ ಬಿಟ್ಟು ಪಲಾಯನ ಮಾಡಿದಾಗ ನರಸನಾಯಕನು ನರಸಿಂಹನ ಆಜ್ಞೆಯಂತೆ ಅವನನ್ನು ಬೆನ್ನಟ್ಟಿ ಸೆರೆಹಿಡಿದು ತಂದನು. ಆನಂತರ, ನರಸಿಂಹ ಭೂಪಾಲನು ಚೋಳಮಂಡಲಕ್ಕೆ ಅವನ ವಂಶೀಕನನ್ನು ರಾಜ್ಯಪಾಲನನ್ನಾಗಿ ಮಾಡಿ ಅಲ್ಲಿನ ಜನರ ಕಷ್ಟವನ್ನು ಪರಿಹರಿಸಿ ಶಾಂತಿಸ್ಥಾಪನೆ ಮಾಡಿದನು. (the Chola King then fled to the sea coast leaving all his wealth and relatives behind him".
- Sources of Vijayanagaram History)
ಬಹಮನಿ ಸುಲ್ತಾನರ ಸೈನ್ಯವು ಕಂಚಿ, ಮಳೂರುಗಳ ಮೇಲೆ ಧಾಳಿ ಮಾಡಿ ಹಿಂದೂಜನರ ಪ್ರಾಣ, ಮಾನಗಳಿಗೆ ಹಾನಿಮಾಡಿ, ಹಿಂದೂಧರ್ಮದ ನಾಶ ಪ್ರಯತ್ನ ಮಾಡಿದಾಗ ನರಸಿಂಹರಾಜ-ನರಸನಾಯಕರು ಸೈನ್ಯದೊಡನೆ ಅಲ್ಲಿಗೆ ಧಾವಿಸಿ ಅವನ ಸೈನ್ಯವನ್ನು ಮುತ್ತಿ ಪರಾಜಯಗೊಳಿಸಿ ಅವರನ್ನು ಅಲ್ಲಿಂದ ಓಡಿಸಿ ಕಂಚಿ-ಮಳೂರುಗಳಲ್ಲಿ ಶಾಂತಿಸ್ಥಾಪನೆ ಮಾಡಿ ಹಿಂದೂಧರ್ಮವನ್ನು ಸಂರಕ್ಷಿಸಿದನು.'
ಯೂಸುಫ್ ಆದಿಲ್ ಖಾನನು ತಾನೇ ವಿಜಾಪುರದ ಸುಲ್ತಾನನೆಂದು ಘೋಷಿಸಿಕೊಂಡು, ಅಹಮದ್ ನಗರದ ಸಣ್ಣ ವಯಸ್ಸಿನ ಸುಲ್ತಾನನಾಗಿದ್ದ ಮೊಹಮ್ಮದನ ರಾಜ್ಯವನ್ನೂ ಕಬಳಿಸಲು ಯತ್ನಿಸಿದಾಗ, ಅಹಮದ್ ನಗರದ ಕಾರ್ಯಕರ್ತನಾದ ಕಾಸೀಂಬರೀದ್ ತುರ್ಕನ ಪ್ರಾರ್ಥನೆಯಂತೆ ನರಸಿಂಹನು ಕನ್ನಡ ಸಾಮ್ರಾಜ್ಯದ ಮುಖ್ಯಸೇನಾನಿಯಾದ ತಿಮ್ಮರಾಜ್ ಮತ್ತು ನರಸನಾಯಕರೊಡನೆ ಸೈನ್ಯದೊಡನೆ ಹೊರಟನು. ಕಾಸೀಂಬರೀದನು ವಿಜಯನಗರಕ್ಕೆ ಸೇರಿದ್ದ ರಾಯಚೂರು-ಮುದ್ದಲ್ ಪ್ರಾಂತ್ಯಗಳನ್ನು ವಶಪಡಿಸಿಕೊಂಡು ವಿಜಾಪುರವನ್ನು ಮುತ್ತಬೇಕೆಂದು ಕೋರಿದಂತೆ ನರಸಿಂಹ ಭೂಪತಿ, ನರಸನಾಯಕ, ತಿಮ್ಮರಾಜರು, ರಾಯಚೂರು-ಮುದ್ದಲ್ ಪ್ರಾಂತ್ಯಗಳನ್ನು ಜಯಿಸಿ, ಕನ್ನಡ ಸಾಮ್ರಾಜ್ಯಕ್ಕೆ ಸೇರಿಸಿದರು.( Kaseem Badrid - Called in the aid of Vijayanagar against Bijapur, promising for reward the cession of Mudgal and Raichur or the country between the two rivers. Narasimha collected the forces of the Hindus Crossed the Tungabhadra with a large army and after laying waste the country sized the to cities, Mudgal and Raichur, which thus once more passed in to the possession of Vijayanagara - Ferishta ) ಆನಂತರ, ವಿಜಾಪುರವನ್ನು ಮುತ್ತಿ ಜಯಿಸಿದರು. ಯೂಸುಫ್ ಆದಿಲ್ ಖಾನನು ಶರಣಾಗತನಾಗಿ ರಾಯಚೂರು-ಮುಗ್ಗಲ್ಲುಗಳನ್ನು ವಿಜಯನಗರಕ್ಕೆ ಬಿಟ್ಟುಕೊಟ್ಟು, ಕಪ್ಪಕಾಣಿಕೆಗಳನ್ನು ನೀಡಿ ಸಂಧಿ ಮಾಡಿಕೊಂಡನು ಮತ್ತು ಅದೇ ಕಾಲದಲ್ಲಿ ತನ್ನ ರಾಜ್ಯವನ್ನು ಬೇರೊಂದು ಕಡೆಯಿಂದ ಆಕ್ರಮಿಸಿದ ಗೋವೆಯ ಬಹಾದೂರ್ ಗೀಲನೇಯನ್ನು ಹೊಡೆದು ಕಳುಹಿಸಲು ಪ್ರಾರ್ಥಿಸಿದಂತೆ ಗೇಲನೆಯನ್ನು ಅವನ ರಾಜ್ಯದಿಂದ ಹೊರಟು ಹಿಂದಿರುಗುವಂತೆ ಮಾಡಿ ನರಸಿಂಹರಾಜನ ಅಪ್ಪಣೆಯಂತೆ ಅವನಿಗೆ ಮತ್ತೆ ಬಿಜಾಪುರ ರಾಜ್ಯದ ನಿರ್ಬಾಧವಾದ ಅಧಿಕಾರ ವಹಿಸಿಕೊಟ್ಟು ಬಂದರು (Kaseem Badrid Toork wrote to the Ray of Beejanagar that Muhammad Shah was willing to cede of him the forts of Mudkal and Raichur if he would wrest them from Yusuf Adil Khan. Timraj (Heemaraj), the general of the Roy of Vijayanagar, having crossed the river Tungabhadra, laid wast the country as for as Mudkal and Raichur... Yusuf Adil Khan was too weak to repel these attaks by force. He accordingly made peace with Timraj and expelled Bahadur Geelany from his dominions - Dr. Krishnaswamy Ayyangar) ಮತ್ತು ಅಹಮದ್ ನಗರದ ಸಣ್ಣ ವಯಸ್ಸಿನ ಸುಲ್ತಾನನ್ನು ಅವರ ರಾಜ್ಯದಲ್ಲಿ ಸ್ಥಾಪಿಸಿ 'ಪಾರಸೀಕ ರಾಜ ಸಂರಕ್ಷಕ' ಎಂಬ ಪ್ರಶಸ್ತಿಯನ್ನು ಧರಿಸಿದನು. ಅವನು ನೀಡಿದ ಒಂಟೆ, ಸೈನ್ಯ, ಹಸಿರು ಛತ್ರಿ ಮೊದಲಾದ ಬಿರುದುಗಳನ್ನು ನರಸಿಂಹ ಭೂಪನು ಧರಿಸಿದನು.
ನರಸಿಂಹ ಭೂಪಾಲನು ಯವನರಾಜರುಗಳಿಂದ ಸಹಸ್ರಾಧಿಕ ಒಂಟೆ, ಕುದುರೆ, ಮೊದಲಾದವುಗಳನ್ನು ಕಾಣಿಕೆಯಾಗಿ ಪಡೆದು, ಉಷ್ಟಾಧಿಪತಿ, ಗಜಾಧಿಪ, ಅಶ್ವಾಧಿಪ, ಅಂಗಾಧಿಪನಾಗಿ ಅಖಿಲಾಂಗಾಧಿಪತಿ ಮುಂತಾದ ಕೀರ್ತಿ ಗಳಿಸಿದನು.
ಸಾಳುವ ನರಸಿಂಹ ಭೂಪತಿಯು ನಾಗಮಂಡಲದಲ್ಲಿ ಶತ್ರುಗಳನ್ನು ಜಯಿಸಿ ಪಶ್ಚಿಮ ಕರಾವಳಿಯತ್ತ ದೊಡ್ಡ ಸೈನ್ಯದೊಡನೆ ಸಾಗುತ್ತಿರುವಾಗ ಕುತವಾಚಲೇಂದ್ರ ತತವಾಸಿ ಮುಂತಾದವರ ಕೋರಿಕೆಯಂತೆ ಪಶ್ಚಿಮ ಕರಾವಳಿ ತೀರಗಳಲ್ಲಿ ಹಿಂದೂಧರ್ಮದ ಮೇಲೆ ದಾಳಿ ಮಾಡುತ್ತಾ ಪ್ರಜರಿಗೆ ಹಿಂಸೆ ಕೊಡುತ್ತಾ, ಕನ್ನಡ ಸಾಮ್ರಾಜ್ಯದ ವಿರುದ್ದ
ಕಾರ್ಯಪ್ರವೃತ್ತರಾಗಿದ್ದ ಮೊಹಮದೀಯರ ಸೈನ್ಯ, ಜಮೋರಿಯನ್ನರ ಸೈನ್ಯಗಳೊಡನೆ ಪ್ರಥುಗಿರಿ ಸನಿಹದಲ್ಲಿ ಸುವರ್ಣನದೀ ತೀರದಲ್ಲಿ ಹೋರಾಡಿ ಪರಶುರಾಮದೇವರಂತೆ ಶತ್ರುಗಳನ್ನೆಲ್ಲಾ ಸಂಹರಿಸಿ ರಕ್ತದ ಹೊಳೆ ಹರಿಸಿದನು. ಸುತ್ತಲಿಂದಲೂ ಮುತ್ತಿದ್ದ ಶತ್ರುಗಳನ್ನು ಒಬ್ಬನೇ ಅಶ್ವಾರೂಢನಾಗಿ ಮಿಂಚಿನಂತೆ ಸಂಚರಿಸುತ್ತಾ ಪ್ರಚಂಡ ಪರಾಕ್ರಮದಿಂದ ಹೋರಾಡುತ್ತಿರಲು ಅವನನ್ನು ಎದುರಿಸಲಾಗದೆ ಶತ್ರುಗಳು ಪಲಾಯನಗೈದರು. ಶಬರೇಂದ್ರನು ಇದೇ ಕಾಲದಲ್ಲಿ ನರಸಿಂಹ ಭೂಪಾಲನನ್ನು ಅಡ್ಡಗಟ್ಟಲು, ವೀರಾವೇಶದಿಂದ ಹೋರಾಡಿ ಶಬರೇಂದ್ರನನ್ನೂ ಸೋಲಿಸಿದನು ಮತ್ತು ಆ ಪ್ರದೇಶಗಳಲ್ಲಿ ಮತ್ತೆ ಶತ್ರುಗಳು ಪ್ರವೇಶಿಸದಂತೆ ಮಾಡಿ ಅಪಾರ ವಿಜಯವನ್ನು ಗಳಿಸಿದನು. ಹೀಗೆ ನರಸಿಂಹರಾಜನು ದಕ್ಷಿಣಭಾರತದಲ್ಲೆಲ್ಲಾ ಕನ್ನಡ ಸಾಮ್ರಾಜ್ಯದ ವಿಜಯಧ್ವಜವನ್ನು ಮೆರೆಸಿ, ಪ್ರಜಾರಕ್ಷಣೆ, ಶಾಂತಿಸ್ಥಾಪನೆ, ಧರ್ಮಪ್ರತಿಷ್ಠಾಪನೆಯನ್ನು ಮಾಡುತ್ತಾ ಅಸಾಧಾರಣ ಕೀರ್ತಿ ಗಳಿಸಿದನು. ಅವನು ಹೋದಹೋದಲ್ಲೆಲ್ಲಾರಾಜಾಧಿರಾಜರು ನತಮಸ್ತಕರಾಗಿ ಗೌರವಿಸುತ್ತಿದ್ದರು.
ಹೀಗೆ ಸಾಳುವ ನರಸಿಂಹ ಭೂಪಾಲನು ದಕ್ಷಿಣಭಾರತದಲ್ಲಿ ಅನ್ಯಾಯ, ಅತ್ಯಾಚಾರ ನಿರತರಾದ ದುಷ್ಟರಾಜರನ್ನು ಶಿಕ್ಷಿಸಿ, ಎಲ್ಲೆಡೆ ಧರ್ಮ-ಶಾಂತಿ-ಸಮಾಧಾನಗಳು ನೆಲೆಗೊಂಡು ಪ್ರಜರು ನೆಮ್ಮದಿಯಿಂದ ಬಾಳುವಂತೆ ಮಾಡಿ, ಸಮಸ್ತ ರಾಜರ, ಪ್ರಜರ, ಧಾರ್ಮಿಕರ ಗೌರವಾದರಗಳಿಗೆ ಪಾತ್ರನಾದನು. ಶ್ರೀವ್ಯಾಸಗುರುಸಾರ್ವಭೌಮರಿಗೆ ಅಪಾರ ಸಂತೋಷವಾಯಿತು.
ಶ್ರೀವ್ಯಾಸರಾಜಗುರುಸಾರ್ವಭೌಮರು ಚಂದ್ರಗಿರಿಯ ರಾಜಧಾನಿಗೆ ಬಂದು ರಾಜಗುರುಗಳಾದ ಮೇಲೆ ಆರೇಳು ವರ್ಷಗಳು ಸಂದಿದ್ದವು. ಈ ಒಂದು ಅವಧಿಯಲ್ಲಿ ಶ್ರೀಗಳವರ ಉಪದೇಶ - ಮಾರ್ಗದರ್ಶನಗಳಿಂದ ನರಸಿಂಹರಾಜನು ಕನ್ನಡ ಸಾಮ್ರಾಜ್ಯದ ಅಭಿವೃದ್ಧಿ, ಪರರಾಜವಿಜಯ, ಪ್ರಜಾಪರಿಪಾಲನೆ, ಧರ್ಮಸಂರಕ್ಷಣೆ, ಮಿತ್ರರಾಜರೊಡನೆ ಸ್ನೇಹಸಂವರ್ಧನೆ ಮುಂತಾದ ಕಾರ್ಯಗಳನ್ನೆಸಗಿ ಕನ್ನಡನಾಡಿನ ಅನಭಿಷಿಕ್ತ ಸಾಮ್ರಾಟನೆನಿಸಿ ಸರ್ವರ ಮುನ್ನಡೆಗೆ ಪಾತ್ರನಾದುದು ಮಾತ್ರವಲ್ಲದೆ, ಅಖಂಡ ದಕ್ಷಿಣಭಾರತದಲ್ಲಿ ಶಾಂತಿಸ್ಥಾಪನೆ ಮಾಡಿ ಆರ್ಯಧರ್ಮ-ಪ್ರಸಾರಾದಿಗಳಿಂದ 'ಹಿಂದೂ ಧರ್ಮಸುತ್ರಾಣ'ನೆನಿಸಿ ಸಕಲರ ಗೌರವಾದರಗಳಿಗೂ, ಪ್ರೀತಿಗೂ ಪಾತ್ರನಾದನು.
ಶ್ರೀವ್ಯಾಸರಾಜರ ಪ್ರಭಾವದಿಂದಾಗಿ ದಕ್ಷಿಣ ಭಾರತದಲ್ಲೆಲ್ಲಾ ಶಾಂತಿ, ಸಮಾಧಾನಗಳೇರ್ಪಟ್ಟು ಎಲ್ಲ ಕಡೆ ಪ್ರಜರು ಸಂತೋಷದಿಂದ ಬಾಳುತ್ತಿದ್ದುದರಿಂದ ಉತ್ತಮ ವಾತಾವರಣ ಉಂಟಾಗಿತ್ತು. ಇದರಿಂದ ಕ್ರಿ.ಶ. ೧೪೮೨ರ ಹಾಗೆ ಶ್ರೀವ್ಯಾಸರಾಜರು ತಮ್ಮ ಎರಡನೆಯ ಜೈತ್ರಯಾತ್ರೆಯನ್ನು ಕೈಗೊಂಡು ಉತ್ತರಭಾರತದ ಕಡೆ ಸಂಚಾರ ಹೊರಡಲು ನಿಶ್ಚಯಿಸಿದರು.
ಶ್ರೀಪಾದಂಗಳವರನ್ನು ಅಗಲಿರಲಾರದೆ ಸಾಳುವ ನರಸಿಂಹನು ಮೊದಲು ಇನ್ನು ಕೆಲಕಾಲದ ಮೇಲೆ ಹೊರಡಬೇಕೆಂದು ಪ್ರಾರ್ಥಿಸಿದರೂ ಕೊನೆಗೆ ಗುರುಗಳ ತೀರ್ಥಯಾತ್ರೆಗೆ ಸಮಸ್ತ ವ್ಯವಸ್ಥೆಗಳನ್ನೂ ಮಾಡಿ ಶ್ರೀವ್ಯಾಸರಾಜರನ್ನು ವೈಭವದಿಂದ ಬೀಳ್ಕೊಟ್ಟನು. ಶ್ರೀಯವರು ಸಂತೋಷದಿಂದ ಯಾತ್ರೆಗೆ ದಯಮಾಡಿಸಿದರು.
ವಿರೂಪಾಕ್ಷರಾಯನ ದುರಾಡಳಿತದಿಂದ ಬೇಸರಗೊಂಡು ವಿವಿಧ ಕಷ್ಟ-ಕಾರ್ಪಣ್ಯಗಳಿಗೆ ಸಿಲುಕಿದ್ದ ನಾಡಿನ ಪ್ರಜರೀಗ ನೆಮ್ಮದಿಯಿಂದ ಬಾಳುತ್ತಿದ್ದರು. ಇದಕ್ಕೆ ನರಸಿಂಹರಾಜನ ದಕ್ಷ ಆಡಳಿತ, ಪ್ರಜಾವಾತ್ಸಲ್ಯ, ಧರ್ಮಬುದ್ಧಿಗಳೇ ಕಾರಣವಾಗಿತ್ತು. ಜನತೆಯ ಆಶೋತ್ತರಗಳನ್ನು ನೆರವೇರಿಸುವುದರಲ್ಲಿ ದಕ್ಷನೂ, ಪ್ರಜಾನುರಾಗಪಾತ್ರನೂ, ಸರ್ವಜನಹಿತೈಷಿಯೂ, ಮುಖ್ಯವಾಗಿ ಕನ್ನಡ ಸಾಮ್ರಾಜ್ಯದ ಸರ್ವಾಂಗೀಣ ಅಭಿವೃದ್ಧಿತತ್ವರನೂ ಆದ ನರಸಿಂಹರಾಜನೇ ಕನ್ನಡ ಸಾಮ್ರಾಜ್ಯದ ಅಧಿಪತಿಯಾಗಬೇಕೆಂದು ಪ್ರಜಾನಿಕವು ಬಯಸಿತು. ಸಾಮ್ರಾಜ್ಯದ ಇನ್ನಿತರ ರಾಜಕೀಯ ಧುರೀಣರೂ ಇದನ್ನೇ ಬಯಸುತ್ತಿದ್ದರು.
ಕನ್ನಡ ರಾಜ್ಯದ ಪ್ರಮುಖರಾದ ತುಳುವ ನರಸನಾಯಕ, ಭುವನಬಂಧು, ತಿಮ್ಮರಾಜ, ತಿಮ್ಮರಸು ಮುಂತಾದವರು ಪ್ರಜಾಭಿಪ್ರಾಯವನ್ನು ಸಮರ್ಥಿಸಿ, ಚಕ್ರವರ್ತಿಗಳಾಗಿ ಕನ್ನಡ ಸಾಮ್ರಾಜ್ಯದ ಹಿತಸಾಧನೆ ಮಾಡಬೇಕೆಂದು ನರಸಿಂಹರಾಜನನ್ನು ಬಲಾತ್ಕರಿಸಹತ್ತಿದರು. ನರಸಿಂಹರಾಜನು ಹಿತೈಷಿಗಳ, ಪ್ರಜೆಗಳ ಅಭಿಪ್ರಾಯಕ್ಕೆ ತಲೆಬಾಗಿದರೂ ತನ್ನೆಲ್ಲ ಅಭ್ಯುದಯಗಳಿಗೂ ಮುಖ್ಯ ಕಾರಣರಾದ ಶ್ರೀವ್ಯಾಸರಾಜಗುರುಗಳು ಉತ್ತರಭಾರತ ಸಂಚಾರದಲ್ಲಿರುವುದರಿಂದ ಅವರ ಅನುಪಸ್ಥಿತಿಯಲ್ಲಿ ಈ ಶುಭಕಾರ್ಯವು ಶೋಭಿಸದೆಂದು ಹೇಳಲು, ನರಸಾನಾಯಕ ಮುಂತಾದವರು “ಮಹಾಸ್ವಾಮಿ, ಈಗಿನ ಪರಿಸ್ಥಿತಿ- ವಾತಾವರಣಗಳು ನಮಗೆ ಅನುಕೂಲಕರವಾಗಿದೆ. ಜನತೆಯು ಆಶಿಸುತ್ತಿರುವಾಗಲೇ ಈ ಮಂಗಳಕಾರ್ಯವು ಜರುಗುವುದು ಎಲ್ಲ ದೃಷ್ಟಿಯಿಂದಲೂ ಶ್ರೇಯಸ್ಕರ. ತಮ್ಮ ಪೂಜ್ಯಗುರುಗಳಾದ ಶ್ರೀಲಕ್ಷ್ಮೀನಾರಾಯಣಮುನಿಗಳ ಪರಮಸನ್ನಿಧಿಯಲ್ಲಿ ಈ ಶುಭಕಾರ್ಯ ನಡೆಯುವುದು ಉತ್ತಮ. ರಾಜರುಗಳನ್ನು ಕರೆಸುವ ಏರ್ಪಾಟುಗಳನ್ನೂ ಮಾಡೋಣ. ಈಗ ಮೊದಲು ಲಕ್ಷ್ಮೀನಾರಾಯಣಮುನಿಗಳ ದರ್ಶನ ಮಾಡಿ, ಅವರ ಅನುಮತಿ ಪಡೆದು, ಪಟ್ಟಾಭಿಷೇಕಕ್ಕೆ ಒಂದು ಪ್ರಶಸ್ತವಾದ ಮುಹೂರ್ತವನ್ನಿರಿಸಿ, ಅದರ ಸಿದ್ಧತೆಯನ್ನು ಮಾಡುವುದು ಒಳಿತು” ಎಂದು ವಿಜ್ಞಾಪಿಸಿದರು. ಆಪ್ತಷರು, ಮಿತ್ರರು, ಹಿತೈಷಿಗಳೂ ಆದ ಅವರ ಕೋರಿಕೆಗೆ ನರಸಿಂಹರಾಜ ಒಪ್ಪಿಗೆ ನೀಡಿದನು. ನೂತನ ಚಕ್ರವರ್ತಿಯ ಪಟ್ಟಾಭಿಷೇಕದ ಸಿದ್ಧತೆಯು ಉತ್ಸಾಹ, ಸಂಭ್ರಮದಿಂದ ಜರುಗಿತು.
ಸಾಳುವ ನರಸಿಂಹಪ್ರಭುವು ಮಿತಪರಿವಾರದೊಡನೆ ಮುಳಬಾಗಿಲಿಗೆ ತೆರಳಿ ಪೂಜ್ಯ ಲಕ್ಷ್ಮೀನಾರಾಯಣ ಯೋಗೀಂದ್ರರ ದರ್ಶನ ಪಡೆದು ಸಮಸ್ತ ವಿಚಾರಗಳನ್ನೂ ಅರಿಕೆ ಮಾಡಿ “ರಾಜರುಗಳ ಅನುಪಸ್ಥಿತಿಯಲ್ಲಿ ನನ್ನ ಉದ್ಧಾರಕ ಗುರುಗಳಾದ ತಾವು ನೇತೃತ್ವ ವಹಿಸಿ, ಪರಮಾನುಗ್ರಹ ಮಾಡಿ ಈ ಶುಭಕಾರ್ಯವನ್ನು ನೆರವೇರಿಸಿಕೊಟ್ಟು ಈ ದಾಸನನ್ನು ಆಶೀರ್ವದಿಸಬೇಕು” ಎಂದು ಪ್ರಾರ್ಥಿಸಿದನು.
ಶ್ರೀಪಾದರಾಜ ಬಿರುದಾಂಕಿತ ಶ್ರೀಲಕ್ಷ್ಮೀನಾರಾಯಣಮುನಿಗಳು ಪರಮಸಂತುಷ್ಟರಾಗಿ “ರಾಜನ್, ನೀನು ಒಂದು ದಿನ ಕರ್ನಾಟಕ ಸಾಮ್ರಾಜ್ಯಾಧೀಶ್ವರನಾಗುವಿ ಎಂಬುದನ್ನು ನಾವರಿತಿದ್ದೆವು. ಈ ನಂಬಿಕೆ ಹುಸಿಯಾಗಿರಲಿಲ್ಲ. ಎಲ್ಲ ಭಗವದನುಗ್ರಹ, ಮಹಾರಾಜ! ನೀನು ಶ್ರೀವೆಂಕಟೇಶ್ವರನ ಪರಮಭಕ್ತ, ಅದರಂತೆ ಪಂಪಾಪತಿ ಶ್ರೀವಿರೂಪಾಕ್ಷನ ಭಕ್ತನೂ ಆಗಿರುವೆ. ನಾವು ನಿನ್ನೊಡನೆ ತಿರುಪತಿಗೆ ಬಂದು ಶ್ರೀಶ್ರೀನಿವಾಸದೇವರ ಸನ್ನಿಧಿಯಲ್ಲಿ ನಿನಗೆ ಸಂಪ್ರಾದಾಯಕವಾಗಿ ಪಟ್ಟಾಭಿಷೇಕ ಮಹೋತ್ಸವವನ್ನು ನೆರವೇರಿಸಿ ಆಶೀರ್ವದಿಸಿ ಬರುತ್ತೇವೆ. ಆನಂತರ ನೀನು ಶ್ರೀವಿರೂಪಾಕ್ಷಸ್ವಾಮಿಯ ಸನ್ನಿಧಿಯಲ್ಲಿ ಮಹಾರಾಜಧಾನಿಯಲ್ಲಿ ಅಧಿಕೃತವಾಗಿ ಪಟ್ಟಾಭಿಷಿಕ್ತನಾಗಿ ಕನ್ನಡ ಸಾಮ್ರಾಜ್ಯವನ್ನು ಪ್ರಜಾರಂಜಕನಾಗಿ, ಧರ್ಮದಿಂದ ಪರಿಪಾಲಿಸು” ಎಂದಾಜ್ಞಾಪಿಸಿದರು. ಶ್ರೀಯವರ ಉಪದೇಶವಚನ ನರಸಿಂಹ ಭೂಪತಿಯ ಮನಸ್ಸಿಗೆ ಸಂತಸ ನೀಡಿತು. ಶ್ರೀಗುರುಪಾದರ ಅಪ್ಪಣೆಯಂತೆ ವರ್ತಿಸುವುದಾಗಿ ಮಹಾರಾಜ ಗುರುಗಳಲ್ಲಿ ವಿಜ್ಞಾಪಿಸಿದ.
ನರಸಿಂಹರಾಜನಿಗೆ ಅಭಯವಿತ್ತಂತೆ ಶ್ರೀಲಕ್ಷ್ಮೀನಾರಾಯಣಮುನೀಂದ್ರರು ಮಹಾಪ್ರಭುವಿನೊಂದಿಗೆ ಚಂದ್ರಗಿರಿಗೆ ದಯಮಾಡಿಸಿದರು ಮತ್ತು ಕೆಲದಿನಗಳಲ್ಲಿಯೇ ಪಟ್ಟಾಭಿಷೇಕದ ವ್ಯವಸ್ಥೆಗಳೆಲ್ಲವೂ ಜರುಗಿದ ಮೇಲೆ ಒಂದು ಶುಭ ಮುಹೂರ್ತದಲ್ಲಿ ತಿರುಪತಿಯಲ್ಲಿ ಶ್ರೀಶ್ರೀನಿವಾಸನ ದಿವ್ಯಸನ್ನಿಧಿಯಲ್ಲಿ ನರಸಿಂಹರಾಜನಿಗೆ ಕನ್ನಡ ಸಾಮಾಜ್ಯದ ಸಾಳುವ ವಂಶದ ಪ್ರಥಮ ಚಕ್ರವರ್ತಿಯೆಂದು ವೈಭವದಿಂದ ತಮ್ಮ ಅಮೃತಹಸ್ತದಿಂದ ಪಟ್ಟಾಭಿಷೇಕ ಮಹೋತ್ಸವವನ್ನು ನೆರವೇರಿಸಿ “ರಾಜಾಧಿರಾಜ ರಾಜಪರಮೇಶ್ವರ ಧರ್ಮಸಂಸ್ಥಾಪನಾಚಾರ್ಯ” ಎಂಬ ಬಿರುದನ್ನು ದಯಪಾಲಿಸಿ ಅನುಗ್ರಹಿಸಿದರು.
ಸಾಮ್ರಾಜ್ಯಾಭಿಷೇಕದ ಸವಿನೆನಪಿಗಾಗಿ ಚಕ್ರವರ್ತಿಯು ಶ್ರೀನಿವಾಸದೇವರಿಗೆ, ಇತರ ಭಗವತ್ತನ್ನಿಧಿಗಳಿಗೆ ಅನೇಕ ಗ್ರಾಮಭೂಮಿ, ಧನಕನಕವಸ್ತ್ರಾಭರಣಗಳನ್ನು ದಾನವಾಗಿತ್ತನು ಮತ್ತು ಶ್ರೀಪಾದರಾಜಬಿರುದಾಂಕಿತ ಗುರುವರರಿಗೆ ಅನೇಕ ದತ್ತಿಗಳನ್ನಿತ್ತು ಕೃತಾರ್ಥನಾದನು.
ಇದಾದ ಒಂದೆರಡು ತಿಂಗಳಲ್ಲಿಯೇ ವಿಜಯನಗರದಲ್ಲಿ ಶ್ರೀವಿರೂಪಾಕ್ಷಸ್ವಾಮಿಯ ಸನ್ನಿಧಿಯಲ್ಲಿ ಸಮಸ್ತ ಪ್ರಜರು, ನಾಗರಿಕರು, ಸಚಿವ-ಸಾಮಂತ-ಸೈನ್ಯಾಧಿಪತಿ-ರಾಜಮನ್ನೆಯರು, ಪಂಡಿತಮಂಡಲಿ ಜಯಜಯಕಾರ ಮಾಡುತ್ತಿರಲು ಅತ್ಯಂತ ವೈಭವದಿಂದ ಅಧಿಕೃತ ಪಟ್ಟಾಭಿಷೇಕ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು. ಆ ಮಹೋತ್ಸವವನ್ನು ಸಮಸ್ತ ಸಾಮ್ರಾಜ್ಯದ ಪ್ರಜರು ಆನಂದದಿಂದ ಆಚರಿಸಿ, ನಾಡಿನ ಭಾಗ್ಯದಯವಾಯಿತೆಂದು ಹರ್ಷಿಸಿದರು. ಆ ಕಾಲದಲ್ಲಿ ಸಾಮ್ರಾಟನು ದೇವಾಲಯ, ಮಠ, ಛತ್ರಗಳಿಗೆ, ಪಂಡಿತರು-ಕವಿಗಳು-ಕಲೆಗಾರರು, ಭೂಸುರರುಗಳಿಗೆ ತೆರೆದ ಹಸ್ತದಿಂದ ದಾನ ಮಾಡಿ ಸರ್ವರನ್ನೂ ಆನಂದಗೊಳಿಸಿದನು. ಒಂದು ತಿಂಗಳ ಕಾಲ ರಾಜಧಾನಿ ಮತ್ತಿತರ ಕಡೆಗಳಲ್ಲಿ ಮಹೋತ್ಸವವನ್ನಾಚರಿಸಲಾಯಿತು. ಶ್ರೀನರಸಿಂಹಪ್ರಭುವಿನ ಪಟ್ಟಾಭಿಷೇಕದೊಂದಿಗೆ ಕನ್ನಡ ಸಾಮ್ರಾಜ್ಯದಲ್ಲಿ ಸಂಗಮವಂಶದವರ ಆಳ್ವಿಕೆಯು ಮುಗಿದು ನೂತನ ಸಾಳುವ ವಂಶದವರ ಆಳ್ವಿಕೆಯು ಪ್ರಾರಂಭವಾಯಿತು.