|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೪೦. ವಿಜಯನಗರಕ್ಕೆ ದಿಗ್ವಿಜಯ

ಶ್ರೀವ್ಯಾಸರಾಜರು ಒಂದು ದಿನ ಇಮ್ಮಡಿ ನರಸಿಂಹರಾಯನಿಗೆ ಧರ್ಮೋಪದೇಶ ಮಾಡುತ್ತಿರುವಾಗ ನರಸನಾಯಕರ ಆಪ್ತರೂ, ಸಾಳುವ ತಿಮ್ಮರಸು ಮುಂತಾದ ಸಚಿವರುಗಳೂ ವಿಜಯನಗರದಿಂದ ಬಂದು ಗುರುಗಳಿಗೂ, ಸಾರ್ವಭೌಮರಿಗೂ ವಂದಿಸಿದರು. ಆ ತರುವಾಯ “ಶ್ರೀಗುರುದೇವರು ವಿಜಯನಗರಕ್ಕೆ ಚಿತ್ತೈಸಿ ತನಗೆ ಮಾರ್ಗದರ್ಶನ - ಧರ್ಮೋಪದೇಶ ಮಾಡುತ್ತಾ ಸಾಮ್ರಾಜ್ಯಾಭಿವೃದ್ಧಿಗೆ ಸಹಾಯ ಮಾಡಬೇಕೆಂದು ಕ್ಷಮಾಧಿಪತಿಗಳು ಪ್ರಾರ್ಥಿಸಿರುವುದನ್ನು” ತಮ್ಮ ರಾಯರು ಹಾಗೂ ಶ್ರೀಗಳವರಲ್ಲಿ ವಿಜ್ಞಾಪಿಸಿ ನಾಯಕರು ಕಳಿಸಿದ ವಿಜ್ಞಾಪನಾಪತ್ರಗಳನ್ನು ಸಾಮ್ರಾಟನಿಗೂ ರಾಜಗುರುಗಳಿಗೂ ಸಮರ್ಪಿಸಿ “ಗುರುದೇವರನ್ನು ವಿದ್ಯಾನಗರಿಗೆ ಕಳುಹಿಸಿಕೊಟ್ಟು ಕನ್ನಡನಾಡಿನ ಸರ್ವತೋಮುಖ ಅಭಿವೃದ್ಧಿಯಾಗುವಂತೆ ಮಾಡಬೇಕೆಂದು” ಸಾಮ್ರಾಟರಲ್ಲಿ ಬಿನ್ನವಿಸಿ, “ಗುರುವರ್ಯ ! ತಾವು ಪರಮಾನುಗ್ರಹ ಮಾಡಿ ವಿಜಯನಗರಕ್ಕೆ ದಯಮಾಡಿಸಿ ನಮ್ಮೆಲ್ಲರನ್ನೂ ಅನುಗ್ರಹಿಸಬೇಕೆಂದು” ಪರಿಪರಿಯಿಂದ ಪ್ರಾರ್ಥಿಸಿದರು!

ಇಮ್ಮಡಿ ನರಸಿಂಹ ಭೂಪಾಲನು ತನ್ನ ಉದ್ಧಾರಕ ಗುರುಗಳೂ ಸಾಮ್ರಾಜ್ಯದ ಕೇಂದ್ರಬಿಂದುವಾ ಆಗಿರುವ ಶ್ರೀವ್ಯಾಸರಾಜ ಗುರುವರ್ಯರನ್ನು ಅಗಲಿರಲಾಗದಿದ್ದರೂ ತನ್ನ ಮತ್ತು ನಾಡಿನ ಹಿತದೃಷ್ಟಿಯಿಂದ ಶ್ರೀವ್ಯಾಸರಾಜ ಯತಿವರರು ವಿಜಯನಗರದಲ್ಲಿರುವುದು ಶ್ರೇಯಸ್ಕರವೆಂದು ಭಾವಿಸಿ “ಗುರುದೇವ! ನಮ್ಮ ಕಾರ್ಯಕರ್ತರಾದ ನರಸನಾಯಕರ ಪ್ರಾರ್ಥನೆಯಂತೆ ತಾವು ವಿದ್ಯಾನಗರಕ್ಕೆ ದಯಮಾಡಿಸಿ, ಅಲ್ಲಿ ಅವರಿಗೆ ಮಾರ್ಗದರ್ಶಕರಾಗಿದ್ದು ಕನ್ನಡ ಸಾಮ್ರಾಜ್ಯದ ಮತ್ತು ನಿಮ್ಮ ಸೇವಕನಾದ ನನ್ನ ಹಿತಚಿಂತನೆ ಮಾಡಬೇಕು” ಎಂದು ಪ್ರಾರ್ಥಿಸಿದನು. 

ಶ್ರೀವ್ಯಾಸಮುನೀಂದ್ರರು “ಎಲ್ಲವೂ ಶ್ರೀಹರಿ ಸಂಕಲ್ಪ! ಆದಷ್ಟು ಬೇಗ ನಾವು ರಾಜಧಾನಿಗೆ ಬರುವುದಾಗಿ ನರಸನಾಯಕರಲ್ಲಿ ನಿವೇದಿಸಿರಿ” ಎಂದು ಸಚಿವ ಮಂಡಲಿಗೆ ನಿರೂಪಿಸಿ ಅವರನ್ನು ಸಂತೋಷಗೊಳಿಸಿ, ಆಶೀರ್ವದಿಸಿ ಕಳುಹಿಸಿದರು. 

ವಿಜಯನಗರದಲ್ಲಿಂದು ಅಪೂರ್ವ ಸಂಭ್ರಮ ರಾಜಧಾನಿಯು ವಿವಿಧಾಲಂಕಾರಗಳಿಂದ ಶೋಭಿಸಿದೆ. ರಾಜಧಾನಿಯ 

ಬೀದಿ ಬೀದಿಗಳನ್ನು, ಮನೆಮನೆಗಳನ್ನು ಸಾರಿಸಿ, ವಿವಿಧ ವರ್ಣರಂಜಿತ ರಂಗವಲ್ಲಿ, ತಳಿರು ತೋರಣ, ರಂಭಾಸ್ತಂಭ, ಪುಷ್ಪಗಳಿಂದ ಶೃಂಗರಿಸಲಾಗಿದೆ. ನೂರಾರು ಭವ್ಯ ಹಸಿರುವಾಣಿ, ಚಪ್ಪರಗಳನ್ನು ಹಾಕಿದ್ದಾರೆ. ಪ್ರಜಾಜನರು ಬಹು ಉತ್ಸಾಹ - ಸಡಗರಗಳಿಂದ ಓಡಾಡುತ್ತಿದ್ದಾರೆ. ಇದಕ್ಕೆ ಕಾರಣವಿಲ್ಲದಿಲ್ಲ. ಪೂಜ್ಯ ಶ್ರೀವ್ಯಾಸರಾಜ ಗುರುಸಾರ್ವಭೌಮರು ಇಂದು ರಾಜಧಾನಿಗೆ ದಯಮಾಡಿಸಲಿದ್ದಾರೆ! 

ಸಚಿವರಿಂದ ಗುರುಗಳ ಆಗಮನವನ್ನು ಪೂರ್ವಭಾವಿಯಾಗಿ ಅರಿತ ನರಸನಾಯಕನು ಹರ್ಷನಿರ್ಭರವಾಗಿ ಸಕಲರಾಜವೈಭವದಿಂದ ರಾಜಗುರುಗಳನ್ನು ಸ್ವಾಗತಿಸಿ ಕರೆತರಲು ವ್ಯವಸ್ಥೆ ಮಾಡಿ ಅಲಂಕೃತ ಅಶ್ವವನ್ನೇರಿ ಸಚಿವ-ಸಾಮಂತ-ದಂಡನಾಯಕರಿಂದ ಪರಿವೃತನಾಗಿ ರಾಜಧಾನಿಯ ಹೊರವಲಯಕ್ಕೆ ಹೊರಟಿದ್ದಾನೆ. ರಾಜಗುರುಗಳನ್ನು ಸ್ವಾಗತಿಸಲು ರಾಜಧಾನಿಯ ಪ್ರಜಾನೀಕವೇ ಅಲ್ಲಿ ನೆರೆದಿದೆ. ನರಸನಾಯಕನ ಜೊತೆಗೆ ಪ್ರಧಾನಾಮಾತ್ಯರು - ಢಣಾಯಕರು, ಸಹಸ್ರಾರು ಜನ ಸೈನಿಕರು, ರಾಜಪರಿವಾರ, ಪುರಪ್ರಮುಖರು, ಪಂಡಿತರು, ಕವಿಗಳು, ಗಾಯಕರು, ನರ್ತಕಿಯರು, ಧಾರ್ಮಿಕ ಸ್ತ್ರೀ-ಪುರುಷರುಗಳು ಸಾಲುಗಟ್ಟಿ ಹೊರಟಿದ್ದಾರೆ. ಶ್ರೀವಿರೂಪಾಕ್ಷಸ್ವಾಮಿ ದೇವಾಲಯದ ಪೂರ್ಣಕುಂಭಾದಿ ಗೌರವದೊಡನೆ ಅರ್ಚಕರು, ಧರ್ಮದರ್ಶಿಗಳು, ಅಧಿಕಾರಿ ವರ್ಗದವರು ಮುಂಭಾಗದಲ್ಲಿದ್ದಾರೆ. ಶ್ವೇತಛತ್ರ, ಅಪ್ತಾಗಿರಿ, ಮಕರ ತೋರಣ, ಧ್ವಜಪತಾಕೆಗಳು, ನಡುಚಪ್ಪರ, ಚಾಮರಗಳು, ಬೆಳ್ಳಿ-ಬಂಗಾರದ ಬೆತ್ತಗಳನ್ನು ಹಿಡಿದವರು, ಅಲಂಕೃತ ಆನೆಗಳು, ಒಂಟೆಗಳು, ಸಮವಸ್ತ್ರಧರಿಸಿದ ಕುದುರೆ ಸವಾರರು, ನಾದಸ್ವರದವರು, ವೇದಘೋಷ ಮಾಡುವ ಪಂಡಿತರು, ವಂದಿಮಾಗಧರು, ಸಾಮ್ರಾಜ್ಯ ಬಿರುದು ಬಾವಲಿಗಳು ಹೀಗೆ ಹತ್ತಾರು ಸಹಸ್ರ ಜನರು ಹೊರಟಿದ್ದಾರೆ. 

ಕುಲಗಿರಿಗಳಂತೆ ಉನ್ನತವಾದ ಮದಗಜಗಳು, ವಿವಿಧ ಶಸ್ತ್ರಾಸ್ತ್ರಸಜ್ಜಿತರಾದ ಕವಚಧಾರಿ ಯೋಧರು ನರಸನಾಯಕರನ್ನು ಸುತ್ತುಗಟ್ಟಿ ಬರುತ್ತಿದ್ದಾರೆ. ಆನೆಗಳು, ಒಂಟೆಗಳು, ಕುದುರೆಗಳ ಹೇಷಾರವ, ಯೋಧರ ಸಿಂಹನಾದ, ದಂಡಧಾರಿಗಳ ಕೋಲಾಹಲ, ಭೇರಿ, ಮೃದಂಗ, ಮದ್ದಳೆ, ಡಿಂಡಿಮ, ಝರ್ಝರಿ ವಾದ್ಯಗಳ ವಿವಿಧ ಧ್ವನಿಗಳು, ಶಂಖ, ವೇಣು, ಕಹಳೆಗಳ ಧ್ವನಿಗಳು ಇವೆಲ್ಲ ಒಂದಾಗಿ ಜಗನ್ಮಂಡಲವೆಲ್ಲಾ ಶಬ್ದಾಯಮಾನವಾಗಿದೆ. 

ಇಂತು ಪರಮವೈಭವದಿಂದೊಡಗೂಡಿದ ನರಸನಾಯಕನು ಶ್ರೀವ್ಯಾಸಭಗವಾನರ ಆಗಮನವನ್ನು ನಿರೀಕ್ಷಿಸುತ್ತಿದ್ದಾನೆ. ಅಕೋ, ಅತಿ ಸಮೀಪದಲ್ಲಿಯೇ ಕೇಳಿಬರುತ್ತಿದೆ ಕಹಳೆಯ ಧ್ವನಿ! ನಗಾರಿಯ ಶಬ್ದ ಹತ್ತಿರವಾಗುತ್ತಿದೆ. ನೋಡುತ್ತಿದ್ದಂತೆಯೇ ಶ್ರೀಮಠದ ಸಮಸ್ತ ಬಿರುದು-ಬಾವಲಿಗಳೊಡನೆ, ಮಹಾಸಂಸ್ಥಾನ ಪರಿವಾರದೊಡನೆ ಶ್ರೀವ್ಯಾಸರಾಜರು ಸುವರ್ಣಪಾಲಕಿಯಲ್ಲಿ ಕುಳಿತು ಕರದಲ್ಲಿ ತೆರೆದ ತಾಲಾವಾಲಿಗ್ರಂಥವನ್ನು ಅವಲೋಕಿಸುತ್ತಾ ಭತ್ರ-ಚಾಮರ, ವೇದಘೋಷ, ಪಂಡಿತಮಂಡಲೀ ಸಹಿತರಾಗಿ ಬರುತ್ತಿದ್ದಾರೆ. 

ಶ್ರೀಯವರ ಪಾಲಕಿಯ ಮುಂಭಾಗದಲ್ಲಿ ಸುಮಧುರ ಕಂಠಸ್ವರದಿಂದ ಕಿನ್ನರರನ್ನು ಲಜ್ಜೆಗೊಳಿಸುವ ಗಾಯನದ ಚತುರತೆಯಿಂದ ಗಂಧರ್ವವಿದ್ಯಾನಿಪುಣರು ಶ್ರೀಹರಿಯ ಗುಣಗಾನ ಮಾಡುತ್ತಾ ಬರುತ್ತಿದ್ದಾರೆ. ಪಾಲಕಿಯಲ್ಲಿ ಮಂಡಿಸಿದ ಶ್ರೀಪಾದಂಗಳವರ ತೇಜಸ್ಸು ಅತ್ಯದ್ಭುತವಾಗಿದೆ. ಕಾಂಚನ ವರ್ಣದಿಂದ ದೇದೀಪ್ಯಮಾನವಾದ ಭವ್ಯಾಕೃತಿ, ದ್ವಾದಶನಾಮಮುದ್ರೆ - ಗಂಧಗಳಿಂದ ಅಲಂಕೃತರಾಗಿದ್ದಾರೆ. ವಿಸ್ತಾರವಾದ ಹಣೆಯಲ್ಲಿ ಊರ್ಧ್ವಪುಂಡ್ರ ಗಂಧಾಕ್ಷತೆಗಳು ಕಂಗೊಳಿಸುತ್ತಿವೆ. ವಕ್ಷಸ್ಥಳದಲ್ಲಿ ಕಮಲಾಕ್ಷಿ ತುಳಸೀಮಾಲೆಗಳು ಶೋಭಿಸಿವೆ. ಜ್ಞಾನ-ಭಕ್ತಿ-ವೈರಾಗ್ಯಪೂರ್ಣರಾದ ಗುರುಗಳ ಮುಖದಲ್ಲಿ ಮಿಂಚಿನಂತೆ ಮಿನುಗುವ ನೇತ್ರಗಳು ಅವರ ತಪಸ್ಸಿದಿಯನ್ನು ಸಾರುತ್ತಿವೆ. ಮಂದಹಾಸ ವದನಾರವಿಂದದಿಂದ ಆ ಯತಿಚಂದ್ರಮರು ಧರಿಸಿರುವ ಕಾಷಾಯವಸನಗಳು ನಿರೀಕ್ಷಣ ಮಾತ್ರದಿಂದ ಅವರಲ್ಲಿ ಪೂಜ್ಯಭಾವನೆಯನ್ನು ಹುಟ್ಟಿಸುತ್ತಿವೆ. ಇಂತು ತೇಜಃಪುಂಜರಂಜಿತಶರೀರರಾಗಿ ಜ್ಞಾನ-ಭಕ್ತಿ-ವೈರಾಗ್ಯಗಳ ತ್ರಿವೇಣೀಸಂಗಮದಂತೆ, ಸಾತ್ವಿಕತೆಯ ಸಾಕಾರರಾಗಿ ಲೋಕವನ್ನೇ ಆಶ್ಚರ್ಯಗೊಳಿಸುವ ಮಹಾಮಹಿಮರಾದ, ಶ್ವೇತಚಾಮರಗಳಿಂದ ಸೇವಿತರಾದ ಶ್ರೀವ್ಯಾಸಭಗವಾನರನ್ನು ಅವಲೋಕಿಸಿ ನರಸಭೂಪಾಲನು ರೋಮಾಂಚಿತನಾದನು ಮತ್ತು ಕೂಡಲೇ ಕುದುರೆಯಿಂದಿಳಿದು ಪಾದಚಾರಿಯಾಗಿ ಧಾವಿಸಿ, ಗುರುಗಳ ದರ್ಶನ ಮಾಡಿ ಆನಂದಿಸಿದನು.

ಶ್ರೀವ್ಯಾಸಯೋಗೀಂದ್ರರ ಮಹಿಮೆ ಅಗಾಧವಾದುದು. ಅವರು ಮನದಲ್ಲಿನೆನಸಿದ ಮಾತ್ರಕ್ಕೇ ಮಹಾಭೂತಗಳು ಓಡೋಡಿ ಬಂದು ನಮಸ್ಕರಿಸಿ ಅವರು ಕುಳಿತ ಪಾಲಕಿಯನ್ನು ಹೊರಲು ಸಿದ್ಧವಾಗುತ್ತಿದ್ದವು.113 ಹಿಂದೊಮ್ಮೆ ಇವರು ತೀರ್ಥಯಾತ್ರಾ ಕಾಲದಲ್ಲಿ ಅರಣ್ಯ ಮಧ್ಯದಲ್ಲಿ ಸಂಚರಿಸುವಾಗ ಭೀಕರ ಸ್ವರೂಪರಾದ ಚೋರರು ಬಂದಿವರನ್ನು ಸುತ್ತುಗಟ್ಟಿ ನಿಂತರು. ಆಗ ಗುರುಗಳು ಮಂದಹಾಸ ಬೀರಿ “ಪಾಪ, ಜೀವನಕ್ಕಾಗಿ ಬಹು ಕಷ್ಟಪಡುತ್ತಿದ್ದೀರಿ. ನಿಮಗೆ ಬೇಕಾದುದನ್ನು ತೆಗೆದುಕೊಂಡು ಹೋಗಿರಿ” ಎಂದು ಹೇಳಿದಾಗ ಶ್ರೀಯವರ ತೇಜಸ್ಸು ಆ ಮಂದಹಾಸ ಆ ಕಳ್ಳರ ಹೃದಯವನ್ನು ಕಲಕಿಬಿಟ್ಟಿತು. ಅವರ ಎಲ್ಲ ಕ್ರೌರ್ಯವೂ ಹೋಗಿಬಿಟ್ಟಿತು. ಅವರು ಗುರುಗಳಿಗೆ ಶರಣಾಗತರಾಗಿ ನಮಸ್ಕರಿಸಿ ವ್ಯಾಸಯತಿಗಳ ಶಿಷ್ಯರಾಗಿ ಆಶೀರ್ವಾದ ಪಡೆದು ಅಂದಿನಿಂದ ತಮ್ಮ ಕಾರ್ಯಕ್ರಮಗಳನ್ನು ತ್ಯಜಿಸಿ ಗೆಡ್ಡೆಗೆಣಸು-ತರುಪಲ್ಲುವಗಳನ್ನೇ ಆಹಾರವಾಗಿ ಸ್ವೀಕರಿಸಿ ಸಾತ್ವಿಕರಾದರು.

ಮತ್ತೊಮ್ಮೆ ಶ್ರೀವ್ಯಾಸತೀರ್ಥರು ಭಗವಂತನ ಪ್ರೀತ್ಯರ್ಥವಾಗಿ, ಅತ್ಯಂತ ಜ್ವರಪೀಡಿತರಾಗಿದ್ದರೂ ಮೂರು ದಿನ ಉಪವಾಸದಿಂದ ಶ್ರೀಕೃಷ್ಣನನ್ನು ಧ್ಯಾನಿಸುತ್ತಾನಿಶ್ಯಕ್ತರಾಗಿ ಮಲಗಿರುವಾಗ ಭಗವಾನ್ ಬಾಲಗೋಪಾಲನು ಮಿತ್ರರಲ್ಲಿಗೆ ಬರುವಂತೆ ಅಪರಿಮಿತ ಭಕ್ತವಾತ್ಸಲ್ಯದಿಂದ ಗುರುಗಳ ಬಳಿಗೆ ಪ್ರತ್ಯಕ್ಷನಾಗಿ ಬಂದು ದರ್ಶನವಿತ್ತು, ಸುಧಾಮಂಡಲದಂತೆ ಮನೋಹರವಾದ ಬೆಣ್ಣೆಯ ಮುದ್ದೆಯನ್ನು ಕರದಲ್ಲಿ ಪಿಡಿದು, ಕಿಂಕಿಣಿಯ ಝೇಂಕಾರ ಮಾಡುತ್ತಾ ಏಕಾಂತದಲ್ಲಿ ಮನಮೋಹಕವಾದ ತನ್ನ ನರ್ತನ ವಿಲಾಸವನ್ನು ತೋರಿಸಿ ಅನುಗ್ರಹಿಸಿದನು. ಗ್ರಂಥರಚನೆ ಮಾಡಲಪೇಕ್ಷಿಸಿದ ಈ ವ್ಯಾಸಯತಿಗಳಿಗೆ, ಪೂಜ್ಯಳಾದ ಸಾಕ್ಷಾತ್ ವಿದ್ಯಾದೇವಿಯು (ಶ್ರೀಭಾರತೀದೇವಿಯು) ಪುತ್ರವಾತ್ಸಲ್ಯ-ಪ್ರೇಮಭರದಿಂದ ಇವರೆಡಗೈ ತಂದು ಮಹಾಮಹಿಮೆಯುಳ್ಳ ಕಾಂತಿಯುಕ್ತವಾದ ಒಂದು ಮಣಿಮಯ ಲೆಕ್ಕಣಿಕೆಯನ್ನು ಅನುಗ್ರಹಿಸಿದಳು.116 ಆ ದೇವಿಯ ಅನುಗ್ರಹ, ಮಹತ್ವಪೂರ್ಣ ಮಣಿ ಲೆಕ್ಕಣಿಕೆಯ ಪ್ರಭಾವದಿಂದ ಶ್ರೀವ್ಯಾಸಮುನಿಗಳು ಯಾರಿಂದಲೂ ಯಾವಾಗಲೂ ದೂಷಿಸಲಸದಳವಾದ ಪರಮೋತ ಪ್ರ ಗ್ರಂಥರತ್ನಗಳನ್ನು ರಚಿಸಿ ಜಗತ್ತಿನಲ್ಲಿ ವಿಖ್ಯಾತರಾದರು. 

ಶ್ರೀವ್ಯಾಸತೀರ್ಥರ ಕೃಪಾದೃಷ್ಟಿವೀಕ್ಷಣಮಾತ್ರದಿಂದ ಮೇಘಗಳು ವೃಷ್ಟಿಗರೆಯುತ್ತಿದ್ದವು.117 ಇವರಿಗೆ ಮನಸ್ಸಿನಲ್ಲಿ ಅಪಚಾರವೆಸಗಿದವರೂ ಸಹ ಆ ಪಾಪದ ಫಲವಾಗಿ ತಾವಾಗಿಯೇ ಅಕಾಲಮೃತ್ಯುವಿಗೆ ತುತ್ತಾಗುವರೆಂದು ಜನರು ನಂಬಿದ್ದರು.' ಶಾಪಾನುಗ್ರಹಶಕ್ತರಾದ ಈ ಮಹಾತ್ಮರು ಅಮೃತಮಯದೃಷ್ಟಿಯಿಂದ ನೋಡಿದ ಮಾತ್ರದಿಂದ ಅಭಿಮಂತ್ರಿತವಾದ ತಿಲಕವನ್ನು ಹಣೆಯಲ್ಲಿ ಧರಿಸಿದ ರಾಜಮಹಾರಾಜರು ರಣಮುಖದಲ್ಲಿ ಕಾರ್ತವೀರ್ಯಾರ್ಜುನನಂತೆ ಅಸಾಧಾರಣ ಶೌರ್ಯ-ಪರಾಕ್ರಮಗಳಿಂದ ಹೋರಾಡಿ ಶತ್ರುಗಳನ್ನು ಜಯಿಸಲು ಸಮರ್ಥರಾಗುತ್ತಿದ್ದರು.' 

ಇಂತು ಮಹಿಮೋಪೇತರಾದ ಯತೀಶ್ವರರ ಬಳಿಗೆ ಬಂದ ನರಸ ಭೂಪಾಲನು ಶ್ರೀಗುರುಗಳಿಗೆ ಸಾಷ್ಟಾಂಗವೆರಗಿದನು. ಶ್ರೀಗಳವರು ನಗೆಮೊಗದಿಂದ ನರಸ ಮಹೀಪಾಲನ ಕುಶಲಪ್ರಶ್ನೆ ಮಾಡಿದ ಮೇಲೆ ಸಾಮ್ರಾಜ್ಯಧುರಂದರನಾದ ನಾಯಕನ ಆಜ್ಞೆಯಂತೆ ಶ್ರೀವಿರೂಪಾಕ್ಷ ದೇವಾಲಯದ ಅರ್ಚಕಾದಿಗಳು ಪೂರ್ಣಕುಂಭ ಸಹಿತರಾಗಿ ವೇದಘೋಷಗಳಿಂದ ಗುರುವರರನ್ನು ಭಕ್ತಿಯಿಂದ ಸ್ವಾಗತಿಸಿದರು. 

ಆನಂತರ ನರಸನಾಯಕನ ಪ್ರಾರ್ಥನೆಯಂತೆ ಶ್ರೀವ್ಯಾಸತೀರ್ಥರು ಪಾಲಕಿಯಿಂದಿಳಿದು ಅಲಂಕೃತ ಆನೆಯ ಮೇಲೆ ಸುವರ್ಣಾಂಬಾರಿಯಲ್ಲಿ ಕುಳಿತರು. ವಾದ್ಯವೈಭವ, ವೇದಘೋಷ, ಜಯಜಯಕಾರಗಳಾಗುತ್ತಿರಲು ಸನತ್ಕುಮಾರರು ದೇವೇಂದ್ರನೊಡನೆ ಬರುವಂತೆ ನರಸಭೂಪಾಲನ ನೇತೃತ್ವದಲ್ಲಿ ಮೆಲ್ಲಮೆಲ್ಲನೆ ವಿಜಯನಗರವನ್ನು ಪ್ರವೇಶಿಸಿದರು. 

ಇಂತು ರಾಜಗುರುಗಳ ಮೆರವಣಿಗೆಯು ರಾಜವೈಭವದಿಂದ ಬರುತ್ತಿರಲು ಆ ನಗರ ನಿವಾಸಿ ಸ್ತ್ರೀ-ಪುರುಷರು ಬೀದಿಬೀದಿಗಳಲ್ಲಿ ಲಾಜಾ-ಕುಸುಮಗಳ ವರ್ಷಗೈಯುತ್ತ ಜಯಜಯಕಾರ ಮಾಡಿ ವಂದಿಸುತ್ತಿದ್ದರು. ಸುಮಂಗಲೆಯರು ಕದಲಾರತಿಗಳನ್ನೆತ್ತುತ್ತಿದ್ದರು. ಮಧಿ-ಮಾಗಧರು ಗುರುಗಳ ಬಿರುದಾವಳಿಗಳನ್ನು ಉದ್ಯೋಷಿಸುತ್ತಿದ್ದರು. ರಾಜಬೀದಿಯ ಇಕ್ಕೆಲಗಳಲ್ಲಿ, ಮಂದಿರಗಳ ಮೇಲುಪ್ಪರಿಗೆಗಳಲ್ಲಿ ನಿಂತು ಸಹಸ್ರ ಸಹಸ್ರ ಸಂಖ್ಯಾತ ಜನರು ಗುರುಗಳ ದರ್ಶನ ಮಾಡಿ ಕೃತಾರ್ಥರಾಗುತ್ತಿದ್ದರು. 

ನೋಡಲಸದಳವಾದ ಪ್ರಖರ ತೇಜಸ್ಸಿನ ಕಾಂತಿಯಿಂದ ಬೆಳಗುತ್ತಿದ್ದ ಆ ಯತಿಸಾರ್ವಭೌಮರನ್ನು ನಗರವಾಸಿಗಳು ಕುತೂಹಲದಿಂದ ನೋಡುತ್ತಾ ಅವರ ಮಹಿಮಾದಿಗಳನ್ನು ಬಣ್ಣಿಸುತ್ತಾ ಪರಸ್ಪರ ಮಾತನಾಡುತ್ತಿದ್ದರು. ಯತಿವರರು ಮಂದಹಾಸವದನರಾಗಿ ಪಟ್ಟಣಿಗರ ವಚನಗಳನ್ನಾಲಿಸುತ್ತಾ ಕರುಣಾರ್ದ ದೃಷ್ಟಿಯಿಂದ ಅವರನ್ನೇಕ್ಷಿಸುತ್ತಾನವಕುಸುಮಗಳಿಂದ ಲಂಕೃತರಾದ ಅನೇಕ ರಾಜಬೀದಿಗಳನ್ನು ದಾಟಿ ತಮಗಾಗಿ ಏರ್ಪಡಿಸಲಾಗಿದ್ದ ಭವ್ಯಭವನದತ್ತ ಚಿತ್ತೈಸಿದರು.

ಆನಂತರ ಶ್ರೀಗಳವರು ತಮಗಾಗಿ ನರಸಭೂಪಾಲನು ಏರ್ಪಡಿಸಿದ್ದ ಭವ್ಯಮಂದಿರದ ಮುಂದೆ ಅಂಬಾರಿಯಿಂದ ಇಳಿದು ದೇವರನ್ನು ಮುಂದೆ ಮಾಡಿಕೊಂಡು ಹರ್ಷಧ್ವನಿಯಾಗುತ್ತಿರಲು, ಸುಮಂಗಲೆಯರು ಆರತಿ ಮಾಡುತ್ತಿರಲು ಮಹಾಮಂದಿರವನ್ನು ಪ್ರವೇಶಿಸಿದರು. ಆ ಮಂದಿರವು ಸ್ಪಟಿಕಮಣಿಯಂತೆ ಶುಭ್ರವಾದ ಅಮೃತಶಿಲೆಯ ಸೋಪಾನಗಳು, ವಿಸ್ತಾರವಾದ ಸುವರ್ಣ ಜಗಲಿಗಳು, ವಿದ್ರುಮಖಚಿತ ಸ್ತಂಭಗಳ ಸಾಲುಗಳಿಂದಲೂ ಕಂಗೊಳಿಸುತ್ತಿತ್ತು. ನರಸನೃಪಾಲನು ಹಸ್ತಲಾಘವ ನೀಡುತ್ತಿರಲು ಮೃಗರಾಜನು ಪರ್ವತದ ಕಂದರವನ್ನು ಪ್ರವೇಶಿಸುವಂತೆ ಪ್ರವೇಶ ಮಾಡಿದರು. 

ನರಸನಾಯಕನು ಗುರುಗಳನ್ನು ಕರೆತಂದು ಅವರಿಗಾಗಿಯೇ ನಿರ್ಮಿಸಿದ್ದ ಸುವರ್ಣಮಯ ಭದ್ರಾಸನದಲ್ಲಿ (ಮುದ್ರಾಸನದಲ್ಲಿ) ಕೂಡಿಸಿ ನಮಸ್ಕರಿಸಿದನು. ಆಗ ಸಮಸ್ತ ಅಜ್ಞಾನಾಂಧಕಾರವನ್ನು ಧ್ವಂಸಗೊಳಿಸುವ ಸಾಮರ್ಥ್ಯವುಳ್ಳ ವ್ಯಾಸಮುನಿಸಾರ್ವಭೌಮರು ಮಂದಾಕಿನಿಯ ಪುಲಿನ ಮಧ್ಯಭಾಗವನ್ನು ಮಾರ್ಗವಶಾತ್ ಪ್ರವೇಶಿಸಿದ ಮಾರ್ತಾಂಡ ಬಿಂಬದಂತೆ ವಿರಾಜಿಸಿದರು.

ಆನಂತರ ನರಸಭೂಪಾಲನು ವ್ಯಾಸಮುನಿಗಳಿಗೆ ಸಾಮ್ರಾಜ್ಯದ ಸಕಲ ಸಚಿವ-ಸೇನಾನಿ ಢಣಾಯಕ-ಸಾಮಂತರು, ರಾಜಪರಿವಾರ, ವಿದ್ವಜ್ಜನರು, ಪ್ರಮುಖ ನಾಗರಿಕರ ಪರಿಚಯ ಮಾಡಿಸಿದರು. ಗುರುಗಳು, ಎಲ್ಲರ ಕುಶಲಪ್ರಶ್ನೆ ಮಾಡಿ ಫಲಮಂತ್ರಾಕ್ಷತೆಯನ್ನು ಕರುಣಿಸಿದರು. ತರುವಾಯ ತಾಪಸಸಾರ್ವಭೌಮರಾದ ಗುರುಗಳ ಗುಣವರ್ಣನೆಯನ್ನು ಪದೇ ಪದೇ ಕೇಳುವುದರಿಂದ ನಮ್ರಭಾವ ಹೊಂದಿ ಸರ್ವಾವಯವಗಳೂ ಸಂಕುಚಿತವಾದವೋ ಎಂಬಂತೆ ಬಾಗಿದ ಶರೀರವುಳ್ಳವನಾಗಿ ಶ್ರೀಗಳವರ ಎದುರಿನಲ್ಲಿ ಸ್ವಲ್ಪ ದೂರದಲ್ಲಿ ಕರಮುಗಿದು ಶಿರಬಾಗಿ ನಿಂತಿರಲು ಅವನ ವಿನಯಾತಿಶಯವನ್ನು ಕಂಡು ತೃಪ್ತರಾಗಿ ಶ್ರೀವ್ಯಾಸತೀರ್ಥರು ಅವನನ್ನು ಶ್ಲಾಘಿಸಿ, ಆಶೀರ್ವದಿಸಿ, ಫಲಮಂತ್ರಾಕ್ಷತೆ ನೀಡಿ ಅರಮನೆಗೆ ಕಳುಹಿಸಿದರು.125ನರಸಮಹೀಪಾಲನು ತೆರಳಿದ ತರುವಾಯ ತಮಗೆ ವಿಹಿತವಾದ ಸ್ನಾನಾಕ-ಜಪತಪಾದನುಷ್ಯಾ-ದೀಪಾರಾಧನಾದಿಗಳನ್ನು ಕ್ರಮವಾಗಿ ನೆರವೇರಿಸಿ ವ್ಯಾಸಮುನಿಗಳು ವಿಶ್ರಾಂತಿ ಪಡೆದರು. 

ಮರುದಿನ ನರಸನಾಯಕನು ಸಮಸ್ತ ಬಿರುದಾವಳಿ, ವಾದ್ಯವೈಭವದಿಂದ ಬಂದು ಗುರುಗಳ ದರ್ಶನ ಪಡೆದು “ಗುರುದೇವ! ರಾಜಸಭೆಗೆ ದಯಮಾಡಿಸಿ ರಾಜಸಭೆಯಲ್ಲಿ ರಾಜಗುರುಪೀಠವನ್ನಲಂಕರಿಸಿ ಸರ್ವರನ್ನೂ ಆಶೀರ್ವದಿಸಬೇಕು” ಎಂದು ವಿಜ್ಞಾಪಿಸಲು, ಅವನ ಭಕ್ತಿ-ಶ್ರದ್ಧೆಗಳಿಂದ ಸುಪ್ರೀತರಾದ ಶ್ರೀವ್ಯಾಸರಾಜರು ರಾಜಸಭೆಗೆ ದಯಮಾಡಿಸಿದರು. ಕಿಕ್ಕಿರಿದು ತುಂಬಿದ ರಾಜಸಭೆಯಲ್ಲಿ ಸಾಮ್ರಾಜ್ಯಕಾರ್ಯದುರಂಧರನಾದ ನರಸಭೂಪಾಲನು ಗುರುಗಳನ್ನು ಗೌರವದಿಂದ ಕರೆದೊಯ್ದು, ಪಂಡಿತರು ವೇದಘೋಷ ಮಾಡುತ್ತಿರಲು, ತಾಳಸ್ತುತಿಪಾಠಕರು ಬಿರುದಾವಳಿಗಳನ್ನು ಉಚ್ಚರಿಸುತ್ತಿರಲು, ವಾದ್ಯಮೇಳಗಳು ಮೊಳಗುತ್ತಿರಲು ಶ್ರೀಯವರನ್ನು ರತ್ನಸಿಂಹಾಸನದಲ್ಲಿ ಮಂಡಿಸಿ ಧನಕನಕಾಭರಣಾದಿಗಳನ್ನು ಸಮರ್ಪಿಸಿ ರಾಜಗುರು ಶ್ರೀವ್ಯಾಸರಾಜ ಗುರುಸಾರ್ವಭೌಮರಿಗೆ ಜಯವಾಗಲಿ” ಎಂದು ಜಯಜಯಘೋಷ ಮಾಡಿ ನಮಸ್ಕರಿಸಿದನು. ಸಮಸ್ತ ರಾಜಸಭೆಯೂ ಹರ್ಷಧ್ವನಿ, ಕರತಾಡನ, ಜಯಘೋಷ ಮಾಡಿ ಮುನಿವರರಿಗೆ ನಮಿಸಿತು.

ಆಗ ನರಸನಾಯಕನು ತನ್ನ ಪೂರ್ವಾರ್ಜಿತ ಪುಣ್ಯವಿಶೇಷದಿಂದ ಮಹಾತ್ಮರಾದ ಶ್ರೀವ್ಯಾಸತೀರ್ಥರ ಸೇವೆಯು ತನಗೆ ಲಭಿಸಿತೆಂದು ಆನಂದಪುಳಕಿತಗಾತ್ರನಾಗಿ ಭಕ್ತಿ-ಶ್ರದ್ಧೆಗಳಿಂದ ಪಾಂಡುಕುಮಾರನಾದ ಧರ್ಮರಾಜನು ಭಗವಾನ್ ಶ್ರೀಬಾದನಾರಾಯಣದೇವರನ್ನು ಪೂಜಿಸಿದಂತೆ ಅರ್ಘಪಾದ್ಯಾದಿಗಳಿಂದ ಶ್ರೀವ್ಯಾಸತೀರ್ಥರನ್ನು ಅರ್ಚಿಸಿ ಕೃತಾರ್ಥನಾದನು.

ವ್ಯಾಸಯತಿಗಳು ತಾತ್ಕಾಲಿಕ ಸಮುಚಿತ ಧರ್ಮೋಪದೇಶದಿಂದ ಸರ್ವರನ್ನೂ ಆಶೀರ್ವದಿಸಿ, “ಸತ್ಯ-ಧರ್ಮ- ನಿಷ್ಠೆಗಳಿಂದ ಸಕಲ ಪ್ರಜೆಗಳಿಗೆ ಹಿತವಾಗುವಂತೆ, ಸಾಮ್ರಾಜ್ಯ-ಸಾಮ್ರಾಟರಿಗೆ ವಿಧೇಯನಾಗಿ, ಸಾಮ್ರಾಜ್ಯದ ಅಭ್ಯುದಯಾಸಕ್ತನಾಗಿ ಆಡಳಿತವನ್ನು ನಿರ್ವಹಿಸಿ ಕೀರ್ತಿಶಾಲಿಯಾಗಬೇಕು” ಎಂದು ನರಸನಾಯಕನಿಗೆ ಉಪದೇಶಿಸಿ, “ಮಹಾಪರಾಕ್ರಮಿಯೂ, ಸ್ವಾಮಿನಿಷ್ಠನೂ ಕನ್ನಡ ಸಾಮ್ರಾಜ್ಯ ಹಿತಸಾಧಕನೂ, ಶ್ರೀಹರಿಗುರುಭಕ್ತನೂ, ಗುರುವಿಧೇಯಚರಿತನೂ ಆದ ಸಾಮ್ರಾಜ್ಯದ ಕ್ಷಮಾಧಿಪತಿಯಾದ ನರಸಭೂಪಾಲನಿಗೆ ಸಕಲ ಸಚಿವ-ಸಾಮಂತ-ಸೇನಾನಿ-ಢಣಾಯಕರು ಮತ್ತು ಪ್ರಜರೂ ಆಡಳಿತ ವಿಚಾರಾದಿಗಳಲ್ಲಿ ಸಹಕಾರ ನೀಡಿ ನಾಡಿನ ಅಭ್ಯುದಯವಾಗುವಂತೆ ಮಾಡಿ ಶ್ರೇಯೋವಂತರಾಗಬೇಕು” ಎಂದು ಆದೇಶ ನೀಡಿ ಮತ್ತೊಮ್ಮೆ ಸರ್ವರನ್ನೂ ಹರಸಿ ಶ್ರೀಮಠಕ್ಕೆ ದಯಮಾಡಿಸಿದರು.