|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೨೦. ಲಕ್ಷ್ಮೀನಾರಾಯಣಮುನಿಗಳಲ್ಲಿ ವಿದ್ಯಾಭ್ಯಾಸ

ಪಂಢರಾಪುರ ಯಾತ್ರೆಯನ್ನು ಮುಗಿಸಿಕೊಂಡು, ಶ್ರೀಪಾಂಡುರಂಗನ ಅನುಗ್ರಹವನ್ನು ಸಂಪಾದಿಸಿ, ಅವನ ಆದೇಶದಂತೆ ಜಾಂಬವತೀ ಅರ್ಜುನ ಕರಾರ್ಚಿತ ಶ್ರೀರುಕ್ಕಿಣೀ-ಸತ್ಯಭಾಮಾ ಸಮೇತನಾದ ಶ್ರೀರಂಗವಿಠನ ಪ್ರತಿಮೆಯನ್ನೂ - ಶ್ರೀಪಾಂಡುರಂಗನ ಸ್ವಪ್ನಸೂಚಿತ ಅಣತಿಯಂತೆ ದೊರತ ಶ್ರೀವಿಠಲನ ಪ್ರತಿಮೆಗೆ ಶ್ರೀಲಕ್ಷ್ಮೀನಾರಾಯಣಮುನಿಗಳು ತಾವು ಬಹುಕಾಲ ವಾಸಮಾಡಿದ ಶ್ರೀರಂಗದ ಶ್ರೀರಂಗನಾಥ ಹಾಗೂ ಪಂಢರಾಪುರದ ಶ್ರೀಪಾಂಡುರಂಗವಿಠಲನ ಸ್ಮರಣೆಯು ಪ್ರತಿದಿನವೂ ತಮಗಾಗುತ್ತಿರಬೇಕೆಂದು “ಶ್ರೀರಂಗ-ವಿಠಲನೆಂದು ನಾಮಕರಣ ಮಾಡಿ ರಂಗವಿಠಲನೆಂಬ ಅಂಕಿತದಿಂದಲೇ ಕೃತಿಗಳನ್ನು ರಚಿಸಿದರೆಂದು ಹರಿದಾಸಪಂಥದವರು ಅಭಿಪ್ರಾಯಪಡುತ್ತಾರೆ. ಇನ್ನು ಕೆಲವರು ಅವರಿಗೆ ದೊರೆತ ಪ್ರತಿಮೆಯ ಹೆಸರೇ ರಂಗವಿಠಲನೆಂದೂ ಅದೇ ಅಂಕಿತದಿಂದ ಕೃತಿ ರಚಿಸಿದರೆಂದೂ ಹೇಳುವರು., ಮತ್ತೊಂದು ಭಗವನ್ಮೂರ್ತಿವಿರಾಜಿತ ದೇವರ ಪೆಟ್ಟಿಗೆಯನ್ನೂ ಪಡೆದು ಮುಳಬಾಗಿಲಿಗೆ ಹಿಂದಿರುಗಿದ ಮೇಲೆ ಶ್ರೀಲಕ್ಷ್ಮೀನಾರಾಯಣ- ಮುನಿಗಳು ಶ್ರೀವ್ಯಾಸತೀರ್ಥರಿಗೆ ಸಕ್ರಮವಾಗಿ ಸಕಲ ಶಾಸ್ತ್ರಗಳ ಪಾಠಪ್ರವಚನವನ್ನು ಪ್ರಾರಂಭಿಸಿದರು. ವ್ಯಾಸತೀರ್ಥರು ಗುರುಗಳನ್ನು ಒಂದು ಕ್ಷಣವೂ ಬಿಟ್ಟಿರದೆ ಅವರ ಸೇವೆ ಮಾಡುತ್ತಾ ವಿಧೇಯರಾಗಿ ಭಕ್ತಿ-ಶ್ರದ್ಧೆಗಳಿಂದ ಸಕಲ ಶಾಸ್ತ್ರಗ್ರಂಥಗಳನ್ನೂ ಅವರಿಂದ ಅಧ್ಯಯನ ಮಾಡಲಾರಂಭಿಸಿದರು. ಶ್ರೀಗಳವರು (ಅಹೋರಾತ್ರಿ, ಅಂದು ವ್ಯಾಸಂಗ ಮಾಡಿದ ವಿಷಯಗಳನ್ನು ಚಿಂತನ-ಮಂಥನಗಳಿಂದ ಸ್ವಾಧೀನಪಡಿಸಿಕೊಂಡು ಅಗಾಧವಾದ ವಿದ್ವತ್ತನ್ನು ಸಂಪಾದಿಸಹತ್ತಿದರು. 

ಶ್ರೀವ್ಯಾಸರಾಜರು ನಿಶಿತಬುದ್ಧಿಯುಳ್ಳವರಾಗಿದ್ದರು. ಅವರ ಗ್ರಹಣಶಕ್ತಿ ಅಪೂರ್ವವಾಗಿತ್ತು. ನವನವೋಷಶಾಲಿ ಪ್ರತಿಭಾವಂತರಾದ ಅವರು ಎಂಥ ಕ್ಲಿಷ್ಟವಾದ ಶಾಸ್ತ್ರಪ್ರಮೇಯಗಳನ್ನೂ ಅತಿಸುಲಭವಾಗಿ ಕಲಿತುಬಿಡುತ್ತಿದ್ದರು. ಒಮ್ಮೆ ಒಂದು ವಿಷಯ ಕೇಳಿದರೆ ಸಾಕು, ಅದು ಅವರ ಬುದ್ಧಿಯಲ್ಲಿ ಶಾಶ್ವತವಾಗಿ ನೆಲೆಸಿಬಿಡುತ್ತಿತ್ತು. ಅವರದು ಅಂಥ ಅಸಾಧಾರಣ ಜ್ಞಾಪಕಶಕ್ತಿ. 

ನಿಜವಾಗಿ ವಿಚಾರ ಮಾಡಿದಾಗ ವ್ಯಾಸರಾಜರು ಹೊಸದಾಗಿ ಏನನ್ನೂ ಕಲಿಯಬೇಕಾಗಿರಲಿಲ್ಲವೆನಿಸುವುದು. ಯುಗಯುಗಗಳ ಹಿಂದೆಯೇ ಅವರು ಸಕಲ ಶಾಸ್ತ್ರಾರ್ಥಗಳನ್ನು ಬಲ್ಲ ಜ್ಞಾನಿಗಳಾಗಿದ್ದರು. ಸತ್ಯಲೋಕದ ಕರ್ಮಜದೇವತೆ, ಶಂಕುಕರ್ಣ ನಾಮಾಂಕಿತರಾದ ಶ್ರೀಸರಸಿಜಾಸನರ ಪ್ರೀತಿಯ ಸೇವಕರಾದ ಅವರು ಪ್ರಹ್ಲಾದರಾಜರಾಗಿ ಅವತರಿಸಿದಾಗ ಮಾತೃಗರ್ಭದಲ್ಲಿರುವಾಗಲೇ ಜ್ಞಾನನಿಧಿಗಳಾದ ದೇವರ್ಷಿ ನಾರದರಿಂದ ತತ್ವಜ್ಞಾನದ ಉಪದೇಶವನ್ನು ಪಡೆದ ಭಾಗ್ಯಶಾಲಿಗಳು. ಅವರದು ವಾಗಾಡಂಬರ-ಪ್ರದರ್ಶನಗಳಿಗಾಗಿ ಕಲಿತ ಜ್ಞಾನವಾಗಿರಲಿಲ್ಲ. ಅದು ಸಕಲ ಶಾಸ್ತ್ರಗಳ ಅಚ್ಚುಕಟ್ಟಿನಲ್ಲಿ ವಿಚಾರ-ವಿಮರ್ಶೆಗಳ ಒರೆಗಲ್ಲಿಗೆ ಹಚ್ಚಿ, ಪ್ರಮಾಣಗಳ ಹೊಳಪಿನಲ್ಲಿ ಜಳಪಿಸಿ ಸಂಪಾದಿಸಿ ಶ್ರೀವಿಷ್ಣುಸರ್ವೋತ್ತಮತ್ವ ಪ್ರತಿಪಾದಕವಾದ ನಿಕೃಷ್ಟ ಜ್ಞಾನವಾಗಿದ್ದಿತು. ಅದು ಪರಿಪೂರ್ಣವೂ ಆಗಿದ್ದಿತು. ಅದು ಕೇವಲ ಕಲಿಕೆಗೆ ಉಪದೇಶಕ್ಕೆ ಮಾತ್ರವಾಗಿರದೆ, ಅನುಭವದಿಂದ ಅವರು ಕಂಡುಕೊಂಡ, ಜೀವನದಲ್ಲಿ ಆಚರಣೆಗೆ ತಂದ ದೃಢವಾದ, ಪರಿಪಕ್ವವಾದ ಜ್ಞಾನವಾಗಿತ್ತು. ಅದು ಪ್ರಹ್ಲಾದರ ಜೀವನದ ಪ್ರತಿಹಂತದಲ್ಲಿಯೂ ತಾನೇ ತಾನಾಗಿ ವಿಜೃಂಭಿಸುತ್ತಿತ್ತು. ಜ್ಞಾನವು ಸಾಧಕನ ಜೀವನದುಸಿರಾಗಿರಬೇಕು. ಅದನ್ನು ಜೀವನದಲ್ಲಿ ಅಳವಡಿಸಿಕೊಂಡು, ಅನುಭವಕ್ಕೆ ತಂದುಕೊಂಡು, ಅದರಿಂದಲೇ ಆತೋದ್ದಾರವೆಂದರಿತು, ನಿರ್ದುಷ್ಟವಾದ ಆ ಜ್ಞಾನಾಮೃತಕ್ಕೆ ನಿರ್ವ್ಯಾಜವೂ ಕಾಮನಾರಹಿತವೂ ಆದ ಭಕ್ತಿಯೆಂಬ ಸಕ್ಕರೆಯನ್ನು ಬೆರೆಸಿ, ಆ ಭಕ್ತಿಸಹಕೃತ ಜ್ಞಾನಾಮೃತವಾಹಿನಿಯನ್ನು ಪರಾತ್ಪರನಾದ ಶ್ರೀಮನ್ನಾರಾಯಣನ ಪಾದಾರವಿಂದಗಳಿಗೆ ಅವ್ಯಾಹತವಾಗಿ ಭರದಿಂದ ಹರಿಸಿದಾಗ ಮಾತ್ರ ಅದು ಸಾರ್ಥಕವಾಗುವುದು. ಭಗವತ್ಪಸಾದಜನಕವಾಗುವುದು. ಜೀವನ ನಿಜಗುರಿಯಾದ ಅತ್ಯಂತ ದುಃಖನಿವೃತ್ತಿ ಪೂರ್ವಕ ಶಾಶ್ವತಾನಂದ ಪ್ರಾಪಕವಾಗುವುದು! ಭಗವಂತನಿಗೆ ಅತಿ ಪ್ರೀತಿಜನಕವಾದ ಭಕ್ತಿಸಹಕೃತವಾದ ಇಂಥ ಜ್ಞಾನವು ಶ್ರೀಪ್ರಹ್ಲಾದರಾಜರಿಗೆ ಜನ್ಮದಿಂದಲೇ ಇದ್ದು ಪ್ರವೃದ್ಧವಾಗಿ ಪರಾಕಾಷ್ಠತೆಯನ್ನು ಮುಟ್ಟಿ, ಶ್ರೀಹರಿಯ ಅನುಗ್ರಹವನ್ನು ದೊರಕಿಸಿಕೊಟ್ಟುದು ಅವರ ಜೀವನದ ವಿವೇಚನೆಯಿಂದ ಸ್ಪಷ್ಟವಾಗುವುದು. 

ಇಂತು ಅನುಭವ-ಚಿಂತಾಮಂಥನಗಳಿಂದ ಕಂಡುಕೊಂಡ ನಿತ್ಯಸತ್ಯಭೂತವಾದ ಮಹಾತತ್ವಾರ್ಥಗರ್ಭಿತವಾದ ಆ ಜ್ಞಾನವು ತನ್ನೊಬ್ಬನ ಸ್ವತ್ತಾಗಿ ಉಳಿದರೆ ಅದಷ್ಟು ಶೋಭಿಸದು. ಅದು ಪರರ ಉಪಕಾರಕ್ಕೆ ಉಪಯುಕ್ತವಾಗಬೇಕು. ಆ ಜ್ಞಾನವು ಸರ್ವಸುಜನರ ಉದ್ಧಾರಕ್ಕೆ ಕಾರಣವಾದಾಗ, ಸರ್ವರ ಅಭ್ಯುದಯಕ್ಕಾಗಿ ಅದನ್ನು ವಿನಿಯೋಗಿಸಿದಾಗ, ಆ ಜ್ಞಾನಾಮೃತವನ್ನು ಇತರರಿಗೂ ಹಂಚಿಕೊಟ್ಟಾಗ ಅಂತಹ ಜ್ಞಾನವನ್ನು ಪಡೆದುದು ಸಾರ್ಥಕವಾಗುವುದು. “ಸರ್ವಜನಾಸ್ಸುಖಿನೋ ಭವಂತು” ಎಂಬ ಈ ಬಗೆಯ ಮಹಾ ಔದಾರ್ಯವು ಶ್ರೀಪ್ರಹ್ಲಾದರಾಜರ ಜೀವನದ ಉದಗಲಕ್ಕೂ ವ್ಯಾಪಿಸಿದನ್ನು ಮನಗಾಣಬಹುದಾಗಿದೆ. 

ಶ್ರೀಪ್ರಹ್ಲಾದರಾಜರಾಗಿ ಅವತರಿಸಿದ್ದಾಗ ಅವರು ನಾರದರ ಅನುಗ್ರಹೋಪದೇಶದಿಂದ ಸಂಪಾದಿಸಿ ಬೆಳೆಸಿಕೊಂಡು ಬಂದು ಪರರಿಗೂ ಹಂಚಿಕೊಟ್ಟ ಆ ಪರಿಶುದ್ಧ ಜ್ಞಾನವು ಅವರಿಗೆ ಅತಿಶೀಘ್ರವಾಗಿಯೇ ಫಲವನ್ನೂ ಕೊಟ್ಟುಬಿಟ್ಟಿತು! ವೇದಾದಿಶಾಸ್ತ್ರಗಳೆಲ್ಲವೂ ಪರಾತ್ಪರರಾದ ಭಗವಂತನನ್ನು ಒಲಿಸಿಕೊಂಡು ಅವನ ಪ್ರಸಾದವನ್ನು ಸಂಪಾದಿಸಲೆಂದೇ ಪ್ರವೃತ್ತವಾಗಿದೆ. ಆ ಪರಮಜ್ಞಾನದ ಬಲದಿಂದ ನಮ್ಮ ಪ್ರಹ್ಲಾದರು ಪರಮೇಶ್ವರನಾದ ಶ್ರೀನರಸಿಂಹರೂಪೀ ಶ್ರೀಮನ್ನಾರಾಯಣನ ಸಾಕ್ಷಾತ್ಕಾರ, ಪ್ರಸಾದ, ಅನಿತರಸಾಧಾರಣ ಅನುಗ್ರಹರೂಪ ವರಗಳನ್ನು ಪಡೆದುದು ಭಾಗವತಾದಿಶಾಸ್ತ್ರಗಳಿಂದ ವ್ಯಕ್ತವಾಗುವುದು. 

ಇಂತು ಮಹಾಜ್ಞಾನಿಗಳಾದ ಪ್ರಹ್ಲಾದರಾಜರೇ ಭಗವತ್ತಂಕಲ್ಪದಂತೆ ಜ್ಞಾನಪ್ರಸಾರ-ಲೋಕಕಲ್ಯಾಣಗಳಿಗಾಗಿ ಶ್ರೀವ್ಯಾಸರಾಜರಾಗಿ ಅವತರಿಸಿರುವುದರಿಂದ ಅವರು ಈಗ ಹೊಸದಾಗಿ ಶಾಸ್ತ್ರಜ್ಞಾನವನ್ನು ಸಂಪಾದಿಸಬೇಕಾದ ಅವಶ್ಯಕತೆಯಿರಲಿಲ್ಲ. ಆದರೂ “ನರಜನ್ಮ ನರವತ್ಪವೃತ್ತಿ ಮಾನುಷೇ ಮಾನುಷಾಚಾರಃ” ಎಂದು ಪರಮಾತ್ಮನೇ ಆಜ್ಞಾಪಿಸಿರುವುದರಿಂದ ಜ್ಞಾನಿಗಳಾಗಿದ್ದರೂ ಮಾನವರಾಗಿರುವುದರಿಂದ ಅದಕ್ಕೆ ತಕ್ಕಂತೆ ಸಕಲಶಾಸ್ತ್ರಗಳನ್ನೂ ಅಧ್ಯಯನ ಮಾಡಿ ಜ್ಞಾನಿಗಳಾದಂತೆ ತೋರಿದ್ದಾರೆಂದು ತಿಳಿಯಬೇಕು. 

ಇಲ್ಲಿ ನಾವು ಮತ್ತೊಂದು ವಿಚಿತ್ರ ಸಂಗತಿಯನ್ನು ಮನಗಾಣಬಹುದಾಗಿದೆ. ಶ್ರೀವ್ಯಾಸರಾಜರು ವ್ಯಾಸಂಗ ಮಾಡುತ್ತಿರುವುದು, ಶ್ರೀಲಕ್ಷ್ಮೀನಾರಾಯಣಯೋಗಿಗಳಲ್ಲಿ ಅವರು ಸಾಕ್ಷಾತ್ ಧ್ರುವರಾಜರ ಅವತಾರರಾಗಿದ್ದಾರೆ. ಶ್ರೀವ್ಯಾಸರಾಜರಾದರೋ ಪ್ರಹ್ಲಾದರಾಜಾವತಾರಿಗಳು. ಧ್ರುವ-ಪ್ರಹ್ಲಾದರಿಬ್ಬರೂ ಶ್ರೀನಾರದರ ಉಪದೇಶದಿಂದಲೇ ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆದ ಜ್ಞಾನಿಗಳು. ನಾರದರೂ ಶಿಷ್ಯರಾದ ಈ ಮಹನೀಯರೂ ಕಲಿಯುಗದಲ್ಲಿ ಮತ್ತೆ ಅವತರಿಸುವಂತೆ ಮಾಡಿ, ಒತ್ತಟ್ಟಿಗೆ ಸೇರಿಸಿ, ಗುರುಶಿಷ್ಯರನ್ನಾಗಿ ಮಾಡಿದ್ದು ಶ್ರೀಹರಿಯ ಲೀಲಾಸವಿಲಾಸ ದ್ಯೋತಕವೆಂದು ಹೇಳಬಹುದು. ಮನುಷ್ಯಜನ್ಮದಲ್ಲಿ ಶ್ರೀಪ್ರಹ್ಲಾದರಾಜರು ವ್ಯಾಸರಾಜರಾಗಿ ಜನಿಸಿದ್ದಾರೆ. ಈಗ ಅವರು ಅಧ್ಯಯನದಿಂದ ಜ್ಞಾನವನ್ನು ಸಂಪಾದಿಸಿದಂತೆ ತೋರಬೇಕಾಗಿದೆ. ಅದು ಸಾಮಾನ್ಯರಿಂದ ಕಲಿತಂತಾಗಬಾರದು. ನಾರದರಿಂದ ಅವರಾವ ಜ್ಞಾನವನ್ನು ಪಡೆದರೋ ಅದೇ ನಾರದರ ಉಪದೇಶದಿಂದ ಜ್ಞಾನಿಗಳಾದ, ಭಗವದ್ದಕ್ಕೆ ಶ್ರೀಧ್ರುವರಾಜರಿಂದಲೇ ಉಪದೇಶ ಪಡೆಯಬೇಕೆಂಬುದು ಶ್ರೀಹರಿ ಸಂಕಲ್ಪವೆಂದು ತೋರುತ್ತದೆ. ಅಂತೆಯೇ ಪ್ರಹ್ಲಾದರು ವ್ಯಾಸರಾಜರಾಗಿ ಅವತರಿಸುವ ಮೊದಲೇ ಅವರಿಗೆ ಗುರುಗಳಾಗಿ ಜ್ಞಾನೋಪದೇಶ ಮಾಡಲು ಶ್ರೀಹರಿಯು ಧ್ರುವರಾಜನನ್ನು ಲಕ್ಷ್ಮೀನಾರಾಯಣಮುನಿಗಳಾಗಿ ಅವತರಿಸುವಂತೆ ಮಾಡಿ ತನ್ನ ಅಘಟಿತಘಟನಾಪಟುತ್ವ, ಲೀಲಾವಿಲಾಸಗಳನ್ನು ತೋರಿಸಿದ್ದಾನೆ! ಇದು ಮನಸ್ಸಿಗೆ ಮನವರಿಕೆಯಾದಾಗ ಸಜ್ಜನರಿಗೆ ಪರಮಾನಂದವಾಗುವುದು. 

ವ್ಯಾಸತೀರ್ಥರು ಲಕ್ಷ್ಮೀನಾರಾಯಣಯೋಗಿಗಳಲ್ಲಿ ವೇದ, ವೇದಾಂಗಗಳು, ನಿರುಕ್ತ, ಛಂದಸ್ಸು, ಜ್ಯೋತಿಷಾದಿಶಾಸ್ತ್ರಗಳು, ಸ್ಮೃತಿ-ಪುರಾಣ-ಇತಿಹಾಸಾದಿಗಳು, ಚಾರ್ವಾಕ, ಬೌದ್ಧ, ಜೈನಾದಿನಾಸ್ತಿದರ್ಶನಗಳು, ಪ್ರಾಚೀನ-ನವೀನ ನ್ಯಾಯ, ವೈಶೇಷಿಕ, ವ್ಯಾಕರಣ, ಭಾಟ್ಟ-ಗೌರವಮೀಮಾಂಸಾ, ಯೋಗಶಾಸ್ತ್ರ, ಅತ-ವಿಶಿಷ್ಟಾತಾದಿಪೂರ್ವಪಕ್ಷದರ್ಶನಗಳು, ದೈತಸಿದ್ಧಾಂತ ಹಾಗೂ ಮಂತ್ರಶಾಸ್ತ್ರಾದಿಗಳೆಲ್ಲವನ್ನೂ ನಿಷ್ಠೆಯಿಂದ ಅಧ್ಯಯನ ಮಾಡಿದರು. ಇದರ ಜೊತೆಗೆ ಅರ್ಥಶಾಸ್ತ್ರ, ಗಣಿತಶಾಸ್ತ್ರ, ಸಂಗೀತ, ಚಿತ್ರಕಲೆ ಮುಂತಾದ ವಿದ್ಯೆಗಳನ್ನೂ, ಸಾಹಿತ್ಯಶಾಸ್ತ್ರವನ್ನೂ ಸಹ ವಿಶೇಷಾಕಾರವಾಗಿ ಕಲಿತರು. ಇವೆಲ್ಲವನ್ನೂ ಶ್ರೀವ್ಯಾಸಭಿಕ್ಷುಗಳು ಸುಮಾರು ಕ್ರಿ.ಶ. ೧೪೫೫ ರಿಂದ ೧೪೬೬ ರವರೆಗೆ ಹನ್ನೆರಡು ವರ್ಷಗಳಲ್ಲೇ ಕಲಿತು ಅಸಾಧಾರಣ ಪಾಂಡಿತ್ಯವನ್ನು ಸಂಪಾದಿಸಿ, ಅದ್ವಿತೀಯ ಪ್ರತಿಭಾಶಾಲಿಗಳಾಗಿ ಮಿಂಚಿದರು.' 

ಲಕ್ಷ್ಮೀನಾರಾಯಣಮುನಿಗಳ ಪಾಠಕ್ರಮವು ವೈಶಿಷ್ಟ್ಯಪೂರ್ಣವಾಗಿತ್ತು. ಅವರು ಪ್ರಥಮತಃ ತಾವು ಬೋಧಿಸುವ ಶಾಸ್ತ್ರವು ಏತಕ್ಕಾಗಿ ಪ್ರವೃತ್ತವಾಯಿತೆಂಬುದನ್ನು ತಿಳಿಸಿ, ಆಯಾ ಶಾಸ್ತ್ರಗ್ರಂಥಗಳ ಮಹತ್ವವನ್ನು ಮನದಟ್ಟು ಮಾಡಿಕೊಟ್ಟು, ಗ್ರಂಥಸ್ಥ ವಿಷಯಗಳೆಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿ ತೋರಿಸಿ, ಅವುಗಳ ಮೇಲೆ ಬರುವ ಪೂರ್ವಪಕ್ಷ, ಸಂದೇಹಗಳನ್ನು ಪರಿಹರಿಸಿ, ಉಪಪಾದಿಸುವ ವಿಷಯಗಳನ್ನು ಪ್ರಮಾಣೋದಾಹರಣಪೂರ್ವಕವಾಗಿ ಶಿಷ್ಯರ ಬುದಿಗೆ ಸುಲಭವಾಗಿ ಅವಗತವಾಗುವಂತೆ ಸರಸ, ಸುಂದರ, ಪ್ರೌಢಶೈಲಿಯಲ್ಲಿ ನಿರೂಪಿಸುವುದು ಅವರ ಪಾಠದ ವೈಶಿಷ್ಟ್ಯವಾಗಿತ್ತು. ಶ್ರೀವಿಬುಧೇಂದ್ರತೀರ್ಥರಿಂದ ಈ ಕಲೆಯು ಅವರಿಗೆ ಕರಗತವಾಗಿತ್ತು. ಅಂತೆಯೇ ಅಂದಿನ ಕಾಲದಲ್ಲಿ ಸಮಗ್ರ ಭಾರತಾವನಿಯಲ್ಲಿ ಶ್ರೀಲಕ್ಷ್ಮೀನಾರಾಯಣಮುನಿಗಳಂತೆ ಪಾಠ ಹೇಳುವವರು ಮತ್ತೊಬ್ಬರಿಲ್ಲವೆಂದು ವಿದ್ವಜ್ಜನರು ಪ್ರಶಂಸಿಸುತ್ತಿದ್ದರು. ಶ್ರೀಮದಾಚಾರ್ಯ-ಜಯತೀರ್ಥ ಪರಂಪರಾಗತ ಸಂಪ್ರದಾಯದಂತೆ ಅವರು ಹೇಳುವ ದೈತವೇದಾಂತ ಪಾಠಕ್ರಮವಂತೂ ಅಸಾಧಾರಣವಾಗಿದ್ದಿತು. ಇಂಥ ಲಕ್ಷ್ಮೀನಾರಾಯಣಯೋಗಿಗಳಲ್ಲಿ ವ್ಯಾಸಂಗ ಮಾಡಿದ ವ್ಯಾಸರಾಜರಿಗೆ ಗುರ್ವನುಗ್ರಹೋಪದೇಶಗಳಿಂದ ಶ್ರೀಮದಾಚಾರ್ಯರ ಸಿದ್ಧಾಂತ ಮತ್ತಿತರ ಶಾಸ್ತ್ರಗಳು, ಅವುಗಳ ಪಾಠಪ್ರವಚನ, ಸಂಪ್ರದಾಯಗಳು ಕರತಲಾಮಲಕವಾಗಲು ಕಾರಣವಾಯಿತು. 

ವಿಶೇಷ ವಿದ್ಯಾರ್ಜನಾಕಾಂಕ್ಷಿಗಳೂ, ಕುಶಾಗ್ರಮತಿಗಳೂ ಆದ ಶ್ರೀವ್ಯಾಸರಾಜರು ಪರ್ವತಪ್ರಾಯವಾದ ಷಡ್ನರ್ಶನಗಳನ್ನು ಭೋಜನಕಾಲದ ಪ್ರಾಣಾಹುತಿರೂಪವಾದ ಮೊದಲ ತುತ್ತಿನಂತೆ ಶೀಘ್ರವಾಗಿ ಮತ್ತು ನಿರಾಯಾಸವಾಗಿ ಸ್ವಾಧೀನಪಡಿಸಿಕೊಂಡರು.

ಶಿಷ್ಟರ ಕುಶಾಗ್ರಬುದ್ದಿ, ಪ್ರತಿಭಾದಿಗಳನ್ನು ಕಂಡು ವಿಸ್ಮಿತರಾದ ಲಕ್ಷ್ಮೀನಾರಾಯಣಮುನಿಗಳು ಪ್ರಿಯಶಿಷ್ಯರಿಗೆ ಸಾಮೂಹಿಕ ಪಾಠವಾದ ಮೇಲೆ ಏಕಾಂತವಾಗಿ ವಿಶೇಷ ಶ್ರದ್ಧೆಯಿಂದ ಪಾಠ ಹೇಳಲು ಪ್ರಾರಂಭಿಸಿದ್ದರು. ಶ್ರೀವಿಬುಧೇಂದ್ರತೀರ್ಥರು ದೈತಸಿದ್ಧಾಂತ ವಿದ್ಯೆಗೆ ತಮ್ಮನ್ನು ಹೇಗೆ ಏಕಮೇವಾದ್ವಿತೀಯರನ್ನಾಗಿ ಮಾಡಿ ಅನುಗ್ರಹಿಸಿದರೋ ಅದರಂತೆ ತಾವೂ ಶ್ರೀವ್ಯಾಸರಾಜರನ್ನು ದೈತಸಿದ್ಧಾಂತಕ್ಕೆ ಏಕಮೇವಾದ್ವಿತೀಯರನ್ನಾಗಿ ಮಾಡಲು ಆಶಿಸಿ ಶ್ರೀಮದಾಚಾರ್ಯ-ಟೀಕಾಕೃತ್ಪಾದ ವಿಬುಧೇಂದ್ರತೀರ್ಥ ಪರಂಪರಾಪ್ರಾಪ್ತ ಪಾಠಪ್ರವಚನ ಸಂಪ್ರದಾಯದಂತೆ ಪಾಠ, ಸಂಪ್ರದಾಯ ರಹಸ್ಯಗಳನ್ನು ಹೇಳಲಾರಂಭಿಸಿದರು. ವ್ಯಾಸತೀರ್ಥರು ಗುರುಗಳು ಹೇಳಿದ್ದನ್ನು ತಕ್ಷಣ ಗ್ರಹಿಸಿ, ಅನುವಾದ ಮಾಡಿ ಗುರುಗಳಿಗೊಪ್ಪಿಸುತ್ತಿದ್ದರು. ಹೀಗೆ ಅವರ ವಿದ್ಯಾರ್ಜನೆ ಸಾಗಿತು. 

ಈ ಅಪೂರ್ವ ಗುರುಶಿಷ್ಯರು ಬರಬರುತ್ತಾ ಒಬ್ಬರಿಗೊಬ್ಬರು ತುಂಬಾ ಹತ್ತಿರವಾಗಹತ್ತಿದರು. ಒಬ್ಬರನ್ನೊಬ್ಬರು ಬಿಟ್ಟು ಕ್ಷಣಕಾಲವೂ ಇರುತ್ತಿರಲಿಲ್ಲ. ಲಕ್ಷ್ಮೀನಾರಾಯಣಮುನಿಗಳಿಗೆ ಶಿಷ್ಯರಲ್ಲಿ ಅಪಾರ ಪ್ರೇಮ, ಪುತ್ರವಾತ್ಸಲ್ಯ! ವ್ಯಾಸರಾಜರಿಗೆ ಗುರುಗಳಲ್ಲಿ ಅಸಾಧಾರಣ ಗುರುಭಕ್ತಿ-ಶ್ರದ್ದೆ-ಗೌರವಗಳು ! ಶ್ರೀವ್ಯಾಸರಾಜರು ಗುರುಗಳನ್ನು ಎಡಬಿಡದೆ, ಅವರಿಗೆ ಶುಕ್ರೂಷೆ ಮಾಡುತ್ತಾ, ಅವರ ಪ್ರತಿಯೊಂದು ಕಾರ್ಯಕಲಾಪಗಳಲ್ಲಿಯೂ ನೆರವಾಗಿ ಸೇವಿಸುತ್ತಾ, ಗುರುಗಳ ವಿಶೇಷಾನುಗ್ರಹಕ್ಕೆ ಪಾತ್ರರಾದರು. ಈ ಅಪರೂಪದ ಗುರುಶಿಷ್ಯರನ್ನು ಕಂಡು ವಿದ್ವಜ್ಜನರು ಶಿಷ್ಯ-ಭಕ್ತಜನರು “ಗುರುಗಳೆಂದರೆ ಶ್ರೀಲಕ್ಷ್ಮೀನಾರಾಯಣಯೋಗೀಂದ್ರರು, ಶಿಷ್ಯರೆಂದರೆ ಶ್ರೀವ್ಯಾಸರಾಜಯತಿಪುಂಗವರು!” ಎಂದು ಮುಕ್ತಕಂಠದಿಂದ ಸ್ತೋತ್ರಮಾಡುತ್ತಿದ್ದರು.