Conflict of Devotion and Cruelty

|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ - ಕಲ್ಪತರು

ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು

ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು

೧೩. ದೈತ್ಯಬಾಲಕರಿಗೆ ಪ್ರಹ್ಲಾದನ ಉಪದೇಶ

ಒಂದು ದಿನ ಶಂಡಾಮರ್ಕರು ತಮ್ಮ ಗೃಹಸ್ಥಧರ್ಮವಾದ ಅಗ್ನಿಹೋತ್ರಾದಿಗಳನ್ನು ನೆರವೇರಿಸಲು ಮನೆಗೆ ತೆರಳಿದರು. ಆಗ ದೈತ್ಯಬಾಲಕರು ಆಟವಾಡಲು ಸಮಯ ದೊರೆಯಿತೆಂದು ಉತ್ಸಾಹದಿಂದ ಪ್ರಹ್ಲಾದನಲ್ಲಿಗೆ ಬಂದು “ರಾಜಕುಮಾರ! ಗುರುಗಳು ಮನೆಗೆ ಹೋಗಿರುವರು. ಈಗ ಅನಾಯಾಸವಾಗಿ ವೇಳೆ ದೊರೆತಿದೆ. ಬಾ, ಏನಾದರೂ ಆಟವನ್ನು ಆಡೋಣ' ಎಂದು ಆಹ್ವಾನಿಸಿದರು.

ಆಗ ಮಹಾನುಭಾವನಾದ ಪ್ರಹ್ಲಾದನು ಆಟಪಾಠಗಳಿಂದ ವ್ಯರ್ಥ ಕಾಲಹರಣ ಮಾಡಲಪೇಕ್ಷಿಸುವ ದೈತ್ಯಬಾಲಕರಲ್ಲಿ ಹರಿಭಕ್ತಿಯನ್ನು ಉದ್ದೀಪಿಸಲಿಚ್ಚಿಸಿ ಅವರಲ್ಲಿನ ಕೃಪೆಯಿಂದ ಮೃದುಮಧುರವಚನಗಳಿಂದ “ಮಿತ್ರರೇ, ನಿಮ್ಮ ಶ್ರೇಯಸ್ಸಿಗಾಗಿ ನಾನು ಕೆಲ ಹಿತವಚನಗಳನ್ನು ಹೇಳುತ್ತೇನೆ, ಕೇಳಿರಿ” ಎಂದನು. ಪ್ರಹ್ಲಾದನಲ್ಲಿನ ಗೌರವ ಬುದ್ದಿಯಿಂದ ದೈತ್ಯಬಾಲಕರು ಅವನ ಸುತ್ತಲೂ ನಿಂತು “ಆಗಲಿ ಮಿತ್ರ, ನೀನು ನಮ್ಮ ಹಿತಕ್ಕಾಗಿ ಹೇಳುವುದನ್ನು ನಾವು ಕೇಳಲು ಸಿದ್ಧರಿದ್ದೇವೆ” ಎಂದರು.

ದೈತ್ಯಯೋನಿಯಲ್ಲಿ ಜನಿಸಿದ್ದರೂ ಭಗವದ್ಭಕ್ತನಾದ ಪ್ರಹ್ಲಾದನು ಮುಖ್ಯಪ್ರಾಣನಲ್ಲಿರತನಾದ್ದರಿಂದ ಕರುಣೆಯಿಂದ ದೈತ್ಯಬಾಲಕರಿಗೆ ಹೀಗೆ ಉಪದೇಶಿಸಿದನು.

ಪ್ರೀತ್ಯಾಸ್ಪದರಾದ ದೈತ್ಯಬಾಲಕರೇ! ಸದಾ ಮಂಗಳಕರವಾದ ನನ್ನ ಮಾತನ್ನಾಲಿಸಿರಿ. ಕೇವಲ ಆಟ-ಪಾಠಗಳಲ್ಲಿಯೇ ಕಾಲವನ್ನು ವ್ಯರ್ಥ ಮಾಡಬೇಡಿರಿ. ಮೃತ್ಯುವು ಬೆನ್ನಹಿಂದೆಯೇ ಬಾಯಿ ತೆರೆದು ನಿಂತಿರುವುದು, ಯಾವ ಸಮಯದಲ್ಲಿ ನಾವು ಮೃತ್ಯುವಶವಾಗುವೆವೋ ಹೇಳಲಾಗುವುದಿಲ್ಲ. ನಿಮ್ಮ ಸಮವಯಸ್ಕರಾದ ಎಷ್ಟೋ ಬಾಲಕರು ಸಣ್ಣ ವಯಸ್ಸಿನಲ್ಲಿಯೇ ಮೃತರಾಗಿರುವುದನ್ನು ನೋಡುತ್ತಿದ್ದೀರಿ. ಆಯುಷ್ಯವು ನಮ್ಮ ಸ್ವಾಧೀನದಲ್ಲಿಲ್ಲ. ಆದ್ದರಿಂದ ಕ್ರೀಡಾದಿಗಳಲ್ಲಿ ನಿರತರಾಗಿ ಕೆಡಬೇಡಿರಿ. 

ನ ಪುರಾ ವಿವಶಂ ಬಾಲಾ ಆತ್ಮನೋSರ್ಥ ಪ್ರಿತೈಷಿಣಃ |

ಗುರೂ ಮಪಿ ನ ಗ್ರಾಹ್ಯಂ ಯದನರ್ಥಥ್ರಕಲ್ಪನಮ್ || ಭಾಗವತ-೭-೬-೨

ಹಿಂದಿನ ಕಾಲದಲ್ಲಿ ಮಾರ್ಕಂಡೇಯರೇ ಮೊದಲಾದವರು ಬಾಲ್ಯದಿಂದಲೇ ಶಾಶ್ವತಸುಖಕ್ಕಾಗಿ ಭಗವದ್ ಜ್ಞಾನವನ್ನು ಸಂಪಾದಿಸಿ ಉತ್ಕೃತರಾದರು. ನಮ್ಮ ಗುರುಗಳೂ ನಮಗೆ ಜ್ಞಾನೋಪದೇಶ ಮಾಡುತ್ತಿದ್ದಾರಲ್ಲ ಅದರಿಂದ; ನಮಗೆ ಶ್ರೇಯಸ್ಸಾಗುವುದಿಲ್ಲವೇ ? ಎಂದು ನೀವು ಕೇಳಬಹುದು. ನಿಜ, ಗುರುಗಳು ಉಪದೇಶಿಸುತ್ತಿದ್ದಾರೆ, ಆದರೆ ಅವರು ಉಪದೇಶಿಸುತ್ತಿರುವುದೇನು ? ಧರ್ಮ, ಅರ್ಥ, ಕಾಮಗಳೆಂಬ ತ್ರಿವರ್ಗವನ್ನು! ಅದು ವೈಷಯಿಕ ಸುಖೋಪಭೋಗ ಸಾಧನವಾಗಿರುವುದರಿಂದ ಅದು ನಿಮ್ಮನ್ನು ಸಂಸಾರರೂಪ ಸುಳಿಗೆ ತಳ್ಳುವುದು. ಅದು ಅನರ್ಥಕ್ಕೆ ಕಾರಣವಾಗಿದೆ. ಅದರಿಂದ ಅಜ್ಞಾನ ಪರಿಹಾರವಾಗಿ ಶ್ರೀಹರಿಯ ಪ್ರಸಾದ ಮತ್ತು ಮೋಕ್ಷಸುಖವು ದೊರಕಲಾರದು. ಆದುದರಿಂದ ಕೇವಲ ಸಂಸಾರದಲ್ಲಿಯೇ ತೊಳಲುವಂತೆ ಮಾಡುವ ಗುರುಗಳ ಉಪದೇಶವು ಅಗ್ರಾಹ್ಯವಾಗಿದೆ.

ಯದುಕ್ಕಾ ನ ಪ್ರಬುದ್ಧತ ಸುಪ್ತಜ್ಞಾನನಿದ್ರಯಾ |

ನ ಶ್ರದ್ಧಧ್ಯಾನತಂ ತಸ್ಯ ಯಥಾಂಧೀ ಹೂಂಧನಾಯಕಃ || ಭಾಗವತ-೭-೬-೩

ನಿಮ್ಮ ಗುರುಗಳ ಉಪದೇಶದಿಂದ ವೈಷಯಿಕಸುಖವು ಲಭಿಸಿದರೂ ಆ ಸುಖವು ದುಃಖಾನುಬಂಧಿಯೇ ಆಗಿರುವುದು, ಅದನ್ನು ಕೇಳಿದರೆ ಒಬ್ಬ ಕುರುಡನು ಮತ್ತೊಬ್ಬ ಕುರುಡನ ಮಾರ್ಗದರ್ಶನದಲ್ಲಿ ಹೋಗಿ ಕೊನೆಗೆ ಅವರಿಬ್ಬರೂ ದೊಡ್ಡ ಹಳ್ಳದಲ್ಲಿ ಬಿದ್ದು ಅನರ್ಥಕ್ಕೆ ಗುರಿಯಾಗುವಂತಾಗುವುದಾದ್ದರಿಂದ ಅವರ ಮಾತು ಕೇಳಬಾರದು. ಹಾಗಾದರೆ ಶಂಡಾಮರ್ಕರು ಗುರುಗಳಲ್ಲವೇ ? ಅವರ ಮಾತು ಕೇಳುವುದು ಯುಕ್ತವಲ್ಲವೇ ಎಂದು ನೀವು ಪ್ರಶ್ನಿಸಬಹುದು. ಸ್ವಲ್ಪ ವಿಚಾರಮಾಡಿರಿ. “ಗುಶಬ್ದಸ್ವಂಧಕಾರಸ್ಯಾದ್ರುಶಬ್ದಸನ್ನಿವರ್ತಕ” ಎಂದು ಶಾಸ್ತ್ರಕಾರರು ಗುರು ಶಬ್ದವನ್ನು ನಿರ್ವಚನ ಮಾಡಿದ್ದಾರೆ. ಅಂದರೆ ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ ಜ್ಞಾನವನ್ನು ಬೆಳಗಿಸುವವರೇ ಗುರುಗಳು, ನಮ್ಮ ಗುರುಗಳಲ್ಲಿ ಆ ಧರ್ಮವಿಲ್ಲವೇ ? ಎಂದರೆ ಕೇಳಿ ಮಿತ್ರರೇ, ಸ್ವತಃ ಗುರುಗಳಿಗೆ ಅಜ್ಞಾನಾದಿಗಳಿರಬಾರದು. ಶಿಷ್ಯರನ್ನು ಅಜ್ಞಾನ ನಿದ್ರೆಯಿಂದೆಚ್ಚರಿಸಿ ಆತ್ರೋದ್ಧಾರಕ್ಕೆ ಸಹಾಯಕವಾದ ಜ್ಞಾನವನ್ನು ಉಪದೇಶಿಸಬೇಕು. ಇಂಥವರೇ ಗುರುಗಳು, ನಮ್ಮ ಗುರುಗಳು ಶಾಸ್ತ್ರಾರ್ಥವನ್ನು ಬಲ್ಲವರಾಗಿದ್ದರೂ ಶಾಶ್ವತಸುಖಸಾಧನವಾದ ತತ್ವಜ್ಞಾನವನ್ನು ಬೋಧಿಸದೆ, ಸಂಸಾರದಲ್ಲೇ ರತರಾಗುವಂತೆ ಮಾಡುವ ತ್ರಿವರ್ಗವನ್ನು ಉಪದೇಶಿಸುತ್ತಿದ್ದಾರೆ. ಅಂಥ ಗುರುಗಳ ಮಾತನ್ನು ಕೇಳಿದರೆ ಖಂಡಿತವಾಗಿ ನಿಮಗೆ ಶ್ರೇಯಸ್ಸಾಗುವುದಿಲ್ಲವಾದ್ದರಿಂದ ಅವರ ಉಪದೇಶಕ್ಕೆ ಗಮನಕೊಡಬೇಡಿರಿ.

ಓರ್ವ ದೈತ್ಯಬಾಲಕ : ಪ್ರಹ್ಲಾದ! ನೀನು ಗುರುಗಳ ಮಾತು ಕೇಳಬಾರದೆಂದು ಹೇಳುತ್ತಿರುವೆ. ಗುರುಗಳು ನೀತಿಶಾಸ್ತ್ರವನ್ನು ಉಪದೇಶಿಸುವುದರಿಂದ ನಮ್ಮ ಶತ್ರು-ಮಿತ್ರ-ಉದಾಶೀನರ ಜ್ಞಾನವಾಗಿ ಅದು ನಮ್ಮ ಸಂಪತ್ತಿನ ಹೆಚ್ಚಳಕ್ಕೆ ಕಾರಣವಾಗುವುದರಿಂದ ಅದು ಹೇಯವೆಂದು ಹೇಗೆ ತಿಳಿಯುವುದು?

ಪ್ರಹ್ಲಾದ : ಕಃ ಶತ್ರುಃ ಕ ಉದಾಸೀನಃ ಕಿಂ ಮಿತ್ರಂ ಚೇಹ ಆತ್ಮನಃ |

ಭವತ್ಸಪಿ ನಯ್ಯ ಕಿಂ ಸ್ಯಾದೈವಂ ಸಂಪದ್ವಿಪತ್ಪದಮ್ || - ಭಾಗವತ-೭-೬-೪

ಶತ್ರುಗಳಾರು, ಮಿತ್ರರಾರು, ಉದಾಸೀನರಾರು ? ಭಗವಂತನೇ ಅವರವರ ಕರ್ಮಾನುಸಾರವಾಗಿ ಅದನ್ನು ಪ್ರೇರಿಸುವನು. ಅದೃಷ್ಟಪ್ರೇರಕನಾದ ಪರಮಾತ್ಮನೇ ಸಂಪತ್ತು, ವಿಪತ್ತುಗಳನ್ನು ಕೊಡುವ ಸ್ವತಂತ್ರಪ್ರಭುವಾಗಿದ್ದಾನೆ! ಅವನ ಪ್ರೇರಣೆಯಿಲ್ಲದೆ ನೀತಿಶಾಸ್ತ್ರವೇನು ಮಾಡಬಲ್ಲದು?

ವಿಚಕ್ಷಣ : (ಇನ್ನೊಬ್ಬ ಹುಡುಗ) ಅದು ಹೋಗಲಿ, ಮಿತ್ರ, ಪ್ರವೃತ್ತಿರೂಪ ಧರ್ಮಶಾಸ್ತ್ರವು ಸ್ವರ್ಗಾದಿಸಂಪತ್ತಿಗೆ

ಕಾರಣವಾಗಿರುವುದರಿಂದ ಅದನ್ನು ಗುರುಗಳಿಂದ ಕಲಿಯಬಹುದಲ್ಲವೇ ?

ಪ್ರಹ್ಲಾದ : ಪ್ರವೃತ್ತಿಧರ್ಮಾಚರಣೆಯಿಂದ ಮನುಷ್ಯನು ಇಂದ್ರಿಯಗಳಿಗೆ ವಶನಾಗಿ ಜನನ-ಮರಣರೂಪ ಸಂಸಾರದ ಸುಳಿಯಲ್ಲಿ ಸಿಲುಕಿ ಆತ್ಮಘಾತ ಮಾಡಿಕೊಳ್ಳುವನು. ನಿವೃತ್ತಿಧರ್ಮವನ್ನು ಅನುಸರಿಸಿ ಸರ್ವಕರ್ಮಗಳನ್ನು ಹರ್ಯಪ್ರಣ ಬುದ್ಧಿಯಿಂದ ಶ್ರೀಹರಿಪೂಜೆಯೆಂದು ಮಾಡಿದರೆ, ಆಗ ಆ ಕರ್ಮಗಳು ಸಂಸಾರಬಂಧನಕ್ಕೆ ಕಾರಣವಾಗುವುದಿಲ್ಲ, ನಿಮ್ಮ ಕರ್ಮಾನುಷ್ಠಾನ ಮಾಡುವ ಜ್ಞಾನಿಗಳು ಇಹದಲ್ಲಿ ಸಂಪತ್ತನ್ನೂ ಪರದಲ್ಲಿ ಉತ್ತಮ ಗತಿಯನ್ನೂ ಹೊಂದುತ್ತಾರೆ. ಅಂಥವರು ಬಹು ವಿರಳ. ಪ್ರವೃತ್ತಿ ಕರ್ಮಾನುಷ್ಠಾನದಿಂದ ನಶ್ವರವಾದ ಸ್ವರ್ಗಾದಿಫಲವು ದೊರಕುವುದು. ನಿವೃತ್ತಿ ಕರ್ಮಾನುಷ್ಠಾನದಿಂದ ಜ್ಞಾನವುಂಟಾಗಿ ಕೊನೆಗೆ ಶಾಶ್ವತವಾದ ವೈಕುಂಠ ಪ್ರಾಪ್ತಿಯಾಗುವುದು.

ಮತ್ತೊಬ್ಬಬಾಲಕ : ಅದು ಸರಿ, ಪ್ರಹ್ಲಾದ! ನಿವೃತ್ತಿ ಧರ್ಮಾನುಷ್ಠಾನದಿಂದ ಶ್ರೇಯಸ್ಸುಂಟಾಗುವುದು ಎಂದು ನೀನು ಹೇಳಿದೆ, ಆಗಲಿ, ಅದಕ್ಕೆ ಬೇಕಾದಷ್ಟು ಅವಕಾಶವಿದೆ. 'ಬಾಲ್ಯ ವಿದ್ಯಾಂ ನಿಷೇವೇತ ಯೌವನೇ ದಾರ ಸಂಗ್ರಹಂ | ಸ್ಥಾವಿರ್ಯೇ ಮೋಕ್ಷಮಾತಿಷ್ಟೇತ್‌ ಸರ್ವದಾ ಧರ್ಮಮಾಚರೇತ್ ||' ಎಂದು ಸ್ಮೃತಿಯು ಬೋಧಿಸುತ್ತದೆ. ಮೋಕ್ಷಕ್ಕೆ ಸಾಧನವಾದ ನಿವೃತ್ತಿಧರ್ಮವನ್ನು ನಾವು ನಮಗೆ ವಯಸ್ಸಾದ ಮೇಲೆ ಮಾಡಬಹುದಲ್ಲವೇ?

ಪ್ರಹ್ಲಾದ : (ನಸುನಕ್ಕು) ಮಿತ್ರರೇ ನನ್ನ ಮಾತು ಕೇಳಿರಿ.

ಕೌಮಾರ ಆಚರೇತ್ಪಾಜೋ ಧರ್ಮಾನ್ ಭಾಗವತಾನಿಹ |

ದುರ್ಲಭಂ ಮಾನುಷಂ ಜನ್ಮ ತದದ್ದುವಮರ್ಥದಮ್ || - ಭಾಗವತ-೭-೬

ಆತ್ರೋದ್ಧಾರಕ್ಕೆ ಕಾರಣವಾದ ಭಾಗವತಧರ್ಮಗಳನ್ನು ಆಚರಿಸಲು ನಮಗೆ ವಯಸ್ಸಾಗಲಿ ಎಂದು ಕಾಯಬಾರದು. “ಸರ್ವದಾ ಧರ್ಮಮಾಚರೇತ್” ಎಂದು ಹೇಳಿರುವುದರಿಂದ ಪ್ರಾಜ್ಞನು ಬಾಲ್ಯದಿಂದಲೇ ಭಾಗವತಧರ್ಮಗಳನ್ನು ಆಚರಿಸಲು ಪ್ರಾರಂಭಿಸಬೇಕು. ಮಾನವ ಜನ್ಮವು ಶ್ರೇಯಸ್ಸಾಧನವಾಗಿದೆ. ಆಗಲೇ ಮನುಷ್ಯನಿಗೆ ವಿವೇಕಬುದ್ಧಿಯು ಬರುವುದು. ಆಗ ಶ್ರೀಹರಿತತ್ವಜ್ಞಾನವನ್ನು ಪಡೆದು ಪರಮಪುರುಷಾರ್ಥವಾದ ಮೋಕ್ಷವನ್ನು ಪಡೆಯಬಹುದು. ಮಾನವ ಜನ್ಮವು ದುರ್ಲಭವಾದುದು. ಆದ್ದರಿಂದ ಪರಮಪುರುಷಾರ್ಥಸಾಧನಕ್ಕೆ ಸಹಾಯಕವಾದ ಮಾನವ ಜನ್ಮ ಲಭಿಸಿರುವಾಗ ಬಾಲ್ಯದಿಂದಲೇ ಧರ್ಮಾಚರಣರತರಾಗಬೇಕು. ಸರ್ವ ಪ್ರಾಣಿಗಳಿಗೂ ಹರಿಯೇ ಪ್ರೀತ್ಯಾಸ್ಪದನು. ಅಂತರ್ನಿಯಾಮಕನಾದ ಆ ಪ್ರಭುವು ಸುಖಪ್ರದನೂ, ನಿರ್ವ್ಯಾಜ ಉಪಕಾರಿಯೂ ಆಗಿದ್ದಾನೆ. ಅವನನ್ನು ಬಿಟ್ಟು ಅನ್ಯ ದೇವತೆಗಳನ್ನು ಸೇವಿಸುವುದರಿಂದ ಹಲಕೆಲ ಫಲಗಳು ದೊರೆಯಬಹುದಾದರೂ ಶಾಶ್ವತಸುಖ ಲಭಿಸಲಾರದು. ಆದ್ದರಿಂದ ಜನನ-ಮರಣರೂಪ ಸಂಸಾರ ಬಂಧನವನ್ನು ಕಳೆದು, ಸರ್ವಜೀವರ ಮುಖ್ಯ ಗುರಿಯಾದ ಶಾಶ್ವತಸುಖರೂಪ ಮೋಕ್ಷವನ್ನು ಕರುಣಿಸುವ ಶ್ರೀಮನ್ನಾರಾಯಣನ ಪಾದೋಪಸರ್ಜನ

ಮಾಡಬೇಕು.

ದೈತ್ಯಬಾಲಕರು : ಪ್ರಹ್ಲಾದ! ಮಾನವನಿಗೆ ನೂರು ವರ್ಷಗಳ ಆಯುಷ್ಯವು ಕ್ಲಿಪ್ತವಾಗಿದೆಯಷ್ಟೆ? ಅಂದಮೇಲೆ ಈ ಅವಧಿಯಲ್ಲಿ ಅನೇಕ ಸುಖಸಾಧನಗಳನ್ನು ಸಂಪಾದಿಸಬಹುದಲ್ಲವೇ? ಹೀಗಿರುವಾಗ “ಕೌಮಾರ ಆಚರೇತ್ಪಾಜ್ಞಃ ಧರ್ಮಾನ್‌ ಭಾಗವತಾನಿಹ ||” ಎಂಬ ನಿಯಮವೇಕೆ ?

ಪ್ರಹ್ಲಾದ : ಮಿತ್ರರೇ, ನೂರು ವರ್ಷ ಆಯುಷ್ಯವಿದ್ದರೂ ದೇಹವು ಶಾಶ್ವತವಾಗಿರುವುದೆಂದು ಹೇಗೆ ಹೇಳಲು ಸಾಧ್ಯ? ನೂರು ವರ್ಷಗಳಲ್ಲಿ ಅರ್ಧಭಾಗವು ರಾತ್ರಿಯಲ್ಲಿ ನಿದ್ರಾದಿಗಳಿಂದ ನಿಷ್ಪಲವಾಗುವುದು. ಇಪ್ಪತ್ತು ವರ್ಷಗಳು ಬಾಲ್ಯ-ಕೌಮಾರ್ಯಾವಸ್ಥೆಗಳಲ್ಲಿ ಆಟನೋಟಗಳಲ್ಲಿ, ಸಾರಾಸಾರಾವಿವೇಕಜ್ಞಾನವಿಲ್ಲದಲೇ ಬೇರೆ ಬೇರೆ ಕಾರ್ಯಗಳಲ್ಲಿ ನಷ್ಟವಾಗುವುದು. ಇನ್ನು ಇಪ್ಪತ್ತು ವರ್ಷಗಳು ವಾರ್ಧಕ್ಯ, ರೋಗ-ರುಜಿನಾದಿಗಳಿಂದ ಬಳಲಿ ಏನು ಮಾಡಲೂ ಸಾಧ್ಯವಾಗದೆ ನಷ್ಟವಾಗುವುದು. ಉಳಿಯುವುದು ಕೇವಲ ಹತ್ತು ವರ್ಷಗಳು ಮಾತ್ರ. ಈ ಹತ್ತು ವರ್ಷಗಳು ಯೌವನದಲ್ಲಿ ವಿಷಯಭೋಗಾದಿಗಳಲ್ಲಿಯೇ ಕಳೆದುಹೋಗುವುದು. ಅಂದಮೇಲೆ ಸಾಧನ ಮಾಡಿಕೊಳ್ಳಲು ಅವಕಾಶವಾದರೂ ಎಲ್ಲಿದೆ? ಗೆಳೆಯರೇ, ಸಂಸಾರದಲ್ಲಿ ಮಗ್ನನಾದವನು ಜ್ಞಾನಿಯಾದರೂ ಶ್ರೀಹರಿಯು ಸರ್ವಸ್ವತಂತ್ರನೆಂಬ ಜ್ಞಾನವಿಲ್ಲದೆ ಇದು ನನ್ನದು ಎಂಬ ಸ್ವಾತಂತ್ರ್ಯ ಭ್ರಮೆಯಿಂದ ಮೋಕ್ಷಸಾಧನವಾದ ಪರಾತ್ಪರ ತತ್ವಜ್ಞಾನಕ್ಕೆ ಎರವಾಗುವನು, ಸಂಸಾರವು ಅಸಾರವೆಂದರಿತಿದ್ದರೂ ಅನಿತ್ಯವೆಂದು ತಿಳಿದಿದ್ದರೂ ಮಡದಿಯ ಮೋಹದ ಮಾತು, ಓರೆನೋಟಗಳಿಗೆ ಮಾರುಹೋಗಿ ಸ್ತ್ರೀಯಳ ಕ್ರೀಡೆಯ ಸಾಧನವಾದ ಆಟಿಕೆಯಾಗಿ (ಗೊಂಬೆಯಾಗಿ) ವರ್ತಿಸುವುದರಿಂದ ಭವಬಂಧನದಿಂದ ಬಿಡಿಸಿಕೊಳ್ಳಲು ಅಶಕ್ತನಾಗುವನು. ಆದ್ದರಿಂದ ವಿಷಯಲೋಲುಪರಾದ ದೈತ್ತರ ಸಂಗವನ್ನು ತೊರೆದು ನೀವು ನಾರಾಯಣನಿಗೆ ಶರಣು ಹೋಗಬೇಕು. ಬ್ರಹ್ಮಾರ್ಪಣದ ಬುದ್ಧಿಯಿಲ್ಲದೆ ಧರ್ಮಾರ್ಥಕಾಮಗಳ ಸೇವನದಿಂದ ಮೋಕ್ಷ ದೊರೆಯದು. ಆದ್ದರಿಂದ ವಿಷಯಸುಖವು ಅಸಾರವೆಂದರಿತು ಸ್ವತಂತ್ರನಾದ ಶ್ರೀಹರಿಯೇ ಮೋಕ್ಷಪ್ರದನೆಂದು ನಂಬಿ ಅವನನ್ನು ಆಶ್ರಯಿಸಿ, ವಿರಕ್ತರಾದ ಜ್ಞಾನಿಗಳು ಸಂಸಾರಬಂಧನದಿಂದ ಮುಕ್ತರಾಗಿದ್ದಾರೆ. ಅದರಂತೆ ನಾವೂ ಆಚರಿಸಬೇಕು.

ಆದುದರಿಂದ ಭಕ್ತಿಯಿಂದ ಭಗವಂತನನ್ನು ಸಂತೋಷಪಡಿಸುವುದು ನಮ್ಮ ಮುಖ್ಯ ಕರ್ತವ್ಯವಾಗಿದೆ.

ವಿಚಕ್ಷಣ : ಮಿತ್ರಾ, ನೀನಿಷ್ಟು ಮಹತ್ವಪೂರ್ಣ ವಿಚಾರಗಳನ್ನು ಮಹಾಜ್ಞಾನಿಯಂತೆ ಉಪದೇಶಿಸುತ್ತಿರುವೆಯಲ್ಲ! ಈ ಜ್ಞಾನವು ನಿನಗೆ ಹೇಗೆ ಲಭಿಸಿತು ? ಪ್ರಹ್ಲಾದನು ಮಿತ್ರನ ವಚನವನ್ನಾಲಿಸಿ ನಸುನಗುತ್ತ “ಗೆಳೆಯರೆ ನನಗೀಜ್ಞಾನವು ಮಹಾತ್ಮರಾದ ದೇವರ್ಷಿ ನಾರದರ ಉಪದೇಶದಿಂದ ಲಭ್ಯವಾಯಿತು. ಅಲಭ್ಯವಾದ ಈ ಜ್ಞಾನವನ್ನು ಶ್ರೀಹರಿಯು ವಿರಕ್ತರಾದ ತನ್ನ ಏಕಾಂತಭಕ್ತರಿಗೆ ಉಪದೇಶಿಸುವನು. ಶ್ರೀಹರಿಯು ತನ್ನ ಏಕಾಂತಭಕ್ತರಾದ ನಾರದರಿಗೆ ಈ ಜ್ಞಾನವನ್ನು ಉಪದೇಶಿಸಿದನು. ನರಸಖನಾದ ನಾರಾಯಣನಿಂದ ಸಾಕ್ಷಾತ್ತಾಗಿ ಉಪದೇಶ ಪಡೆದ ದೇವರ್ಷಿ ನಾರದರಿಂದ ಇಂತಹ ಪರಿಶುದ್ಧ ಭಾಗವತಧರ್ಮಗಳನ್ನೂ, ಭಗವತ್ತತ್ವ ಜ್ಞಾನವನ್ನೂ ನಾನು ತಿಳಿದುಕೊಂಡಿದ್ದೇನೆ.

ದೈತ್ಯಬಾಲಕರು : ಪ್ರಹ್ಲಾದ! ನಾವೂ ನೀನು ಗುರುಗಳಲ್ಲಿಯೇ ಓದುತ್ತಿದ್ದೇವೆ, ಅಂತಃಪುರದಲ್ಲಿ ನಿರ್ಬಂಧದಲ್ಲಿದ್ದ ನಿನಗೆ ನಾರದರ ಮಿಲನ ಹೇಗಾಯಿತು ? ಅವರು ಯಾವಾಗ ನಿನಗೆ ಉಪದೇಶಿಸಿದರು ? ನಮ್ಮ ಅನುಮಾನವನ್ನು ಪರಿಹರಿಸು.

ದೈತ್ಯಕುಮಾರರ ಮಾತನ್ನು ಕೇಳಿ ಪ್ರಹ್ಲಾದಕುಮಾರನು ತಾನು ದೇವರ್ಷಿಗಳಿಂದ ಉಪದೇಶ ಪಡೆದ ಬಗೆಯನ್ನು ಹೇಳಹತ್ತಿದನು.

ಪ್ರಹ್ಲಾದ : “ಹಿಂದೆ ನನ್ನ ತಂದೆಯು ತಪಸ್ಸಿಗೆ ತೆರಳಿದಾಗ ದೇವೇಂದ್ರನು ದೈತ್ಯರನ್ನು ಜಯಿಸಿ ತನ್ನ ಮಾತೆಯನ್ನು ಸೆರೆಹಿಡಿದು ಎಳೆದೊಯ್ಯುತ್ತಿದ್ದನು. ಆಗ ತಾಯಿಯು ಗರ್ಭಿಣಿಯಾಗಿದ್ದಳು. ನಾನು ಅವಳ ಉದರದಲ್ಲಿದ್ದನು. ಇಂದ್ರನು ಗರ್ಭಸ್ಥನಾಗಿದ್ದ ನನ್ನನ್ನು ಸಂಹರಿಸಲು ಪ್ರಯತ್ನಿಸಿದಾಗ ದೈವಯೋಗದಿಂದ ಅಲ್ಲಿಗೆ ಬಂದ ನಾರದರು ಅವನಿಗೆ ಬುದ್ದಿ ಹೇಳಿ “ತಾಯಿಯ ಗರ್ಭದಲ್ಲಿರುವ ಶಿಶುವು ಪರಮ ಭಗವದ್ಭಕ್ತನು. ಅವನನ್ನು ಸಂಹರಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಹೇಳಿದಾಗ ಇಂದ್ರನು ಮಾತೆಯನ್ನು ಬಿಟ್ಟು ನಮಸ್ಕರಿಸಿ ತೆರಳಿದನು. ಅನಂತರ ನಾರದರು ನನ್ನ ತಾಯಿಯನ್ನು ತಮ್ಮಾಶ್ರಮಕ್ಕೆ ಕರೆದೊಯ್ದು ಆಶ್ರಯವಿತ್ತು ಅವಳಿಗೆ ತತ್ವಧರ್ಮಗಳನ್ನು ಉಪದೇಶಿಸುತ್ತಾ ಅವಳ ಪ್ರಾರ್ಥನೆಯಂತೆ ಇಚ್ಛಾಪ್ರಸೂತಿವರವನ್ನು ಕರುಣಿಸಿ ಸಂರಕ್ಷಿಸಿದರು. ಆಗ ನಾರದರು ತಾಯಿಯನ್ನು ನಿಮಿತ್ತ ಮಾಡಿಕೊಂಡು ನನಗೆ ಶ್ರೀಹರಿತತ್ವಗಳನ್ನೂ ತತ್ವಜ್ಞಾ ಸಾಧನವಾದ ಭಾಗವತಧರ್ಮಗಳನ್ನೂ ಉಪದೇಶ ಮಾಡಿದರು. ಮಾತೆಯು ಸಹಜವಾಗಿಯೂ ಬಹುಕಾಲ ಗತಿಸಿದ್ದರಿಂದಲೂ ಅದನ್ನು ಮರೆತಳು. ಆದರೆ ದೇವರ್ಷಿ ನಾರದರ ಅನುಗ್ರಹದಿಂದ ನಾನು ಅದನ್ನು ಮರೆಯಲಿಲ್ಲ. ಈಗ ನಾನು ನನಗೆ ಪ್ರೀತ್ಯಾಸ್ಪದರಾದ ನಿಮಗೂ ಆ ತತ್ವಜ್ಞಾನ ಉಂಟಾಗಲೆಂದೇ ಉಪದೇಶಿಸುತ್ತಿದ್ದೇನೆ. ಮಿತ್ರರೇ, ಶ್ರದ್ಧಾಭಕ್ತಿಗಳಿಂದ ನಿ ಇದನ್ನು ಕೇಳಿರಿ. ನಿಮಗೆ ಉತ್ತಮ ಫಲವು ದೊರಕುವುದು” ಎಂದು ಹೇಳಿ, ಪ್ರಹ್ಲಾದರಾಜನು ಜನ್ಮಾದ್ಯಾ ಷಡಿಮೆ ಭಾವಾ” ಎಂದು ಪ್ರಾರಂಭಿಸಿ 'ತಸ್ಮಾದ್ಭವದ್ಧಿಃ ಕರ್ತವ್ಯಂ ಕರ್ಮಣಾಂ ತ್ರಿಗುಣಾತ್ಮನಾಂ | ಬೀಜನಿರ್ಹರಣೆ ಯೋಗ ಪ್ರವಾಹೋ ಪರಮೋ ಧಿಯಃ ||” ಎಂಬುವವರೆಗೆ ವಿಸ್ತಾರವಾಗಿ ದೈತ್ಯಬಾಲಕರಿಗೆ ಅನೇಕ ಶ್ರೀಹರಿತತ್ವಗಳನ್ನೂ, ಮಹಿಮಾತಿಶಯಗಳನ್ನೂ, ಪರಮಪ್ರಮೇಯಸಾರಗಳನ್ನು ತಿಳಿಸಿಕೊಟ್ಟು, ಭಗವಂತನಲ್ಲಿ ನಿಷ್ಕಲ್ಮಶ ಭಕ್ತಿ ಮಾಡಿದರೆ ಅವ ಅನುಗ್ರಹವಾಗುವುದೆಂದು ಉಪದೇಶಿಸಿದನು.

ದೈತ್ಯಬಾಲಕರು : ಪ್ರಹ್ಲಾದ! ಭಗವಂತನಲ್ಲಿ ಭಕ್ತಿಮಾಡಬೇಕೆಂದು ಹೇಳಿದ್ದೀಯೆ. ಆ ಭಕ್ತಿಯನ್ನು ಯಾವ ರೀತಿಯಾಗಿ ಮಾಡಬೇಕೆಂಬುದನ್ನು ದಯಮಾಡಿ ತಿಳಿಸಿ ಉಪಕರಿಸು.

ಪ್ರಹ್ಲಾದನು ದೈತ್ಯಬಾಲಕರಿಗೆ ನವವಿಧಭಕ್ತಿ, ಭಕ್ತರ ಲಕ್ಷಣಗಳನ್ನು ವಿಸ್ತಾರವಾಗಿ ನಿರೂಪಿಸಿದನು.

ದೈತ್ಯಬಾಲಕರು : ಮಿತ್ರ, ಶ್ರೀಹರಿಯು ಭಕ್ತಿಯಿಂದ ಒಲಿದು ಉದ್ಧರಿಸುವನೆಂದು ಹೇಳಿದೆ. ನಾವು ಏನೂ ತಿಳಿಯದ ಹುಡುಗರು, ಮೇಲಾಗಿ ದೈತ್ಯರು. ನಮ್ಮನ್ನು ಶ್ರೀಹರಿಯು ರಕ್ಷಿಸುವನೇ ?

ಪ್ರಹ್ಲಾದ : ಮಿತ್ರರೇ, ಶ್ರೀಹರಿಯು ನಮ್ಮ ಭಕ್ತಿಯನ್ನು ನೋಡುವನೇ ವಿನಃ ನಮ್ಮ ಜಾತಿ, ವಯಸ್ಸು, ವಿದ್ಯೆ, ಯೋಗ್ಯತೆಗಳನ್ನಲ್ಲ: ಕೇಳಿರಿ -

ನಾಲಂ ದ್ವಿಜತ್ವಂ ದೇವತ್ವಂ ಋಷಿತ್ವಂ ವಾಸುರಾತ್ಮಜಾಃ |

ಪ್ರೀಣನಾಯ ಮುಕುಂದಸ್ಯ ನ ವೃತ್ತಂ ನ ಬಹುಜ್ಞತಾ ||

ನ ದಾನಂ ನ ತಪೋ, ನೇಜಾ ನ ಶೌಚಂ ನ ವ್ರತಾನಿ ಚ |

ಪ್ರಿಯತೇSಮಲಯಾ ಭಕ್ತಾ ಹರಿರನದ್ವಿಡಂಬನಮ್ || - ಭಾಗವತ-೭-೭-೫೩

ಸಮಸ್ತಕ್ಕೂ ಪ್ರಭುವಾದ ಶ್ರೀಮುಕುಂದನಾಮಕ ಹರಿಯನ್ನು ಸಂತೋಷಪಡಿಸಲು ಬ್ರಾಹ್ಮಣಾದಿ ಜಾತಿ, ದೇವತಾಜನ್ಮ, ಋಷಿತ್ವ ಮುಂತಾದವು ಕಾರಣವಲ್ಲ ಅಥವಾ ಅಪಾರ ವಿದ್ವತ್ತು, ದಾನ, ತಪಸ್ಸು, ಯಾಗ, ಶೌಚ, ವತೋಪವಾಸಾದಿಗಳೂ ಕಾರಣವಲ್ಲ. ಆದರೆ ಆ ಪ್ರಭುವಿನಲ್ಲಿ ನಿರ್ದುಷ್ಟವಾದ ಭಕ್ತಿಮಾಡುವುದರಿಂದ ಪರಮಾತ್ಮನು ಪ್ರೀತನಾಗುವನು.

ತತೋ ಹರೇ ಭಗವತಿ ಭಕ್ತಿಂ ಕುರತ ದಾನವಾಃ |

ಆತೋಪಮ್ಮೇನ ಸರ್ವತ್ರ ಸರ್ವಭೂತಾತ್ಮನೀಶ್ವರೇ ||

ದೃತೀಯಾ ಯಕ್ಷರಕ್ಷಾಂಸಿ ಸ್ತ್ರೀಯಃ ಶೂದ್ರಾಃ ಪ್ರಚೌಕಸಃ |

ಖಗಾಃ ಮೃಗಾಃ ಪಾಪಜೀವಾಃ ಸಂತಿ ಹಚ್ಯುತತಂ ಗತಾಃ ||

ಏತಾವಾನೇವ ಲೋಕೇಸ್ಮಿನ್ ಪುಂಸಾಂ ಸ್ವಾರ್ಥಃ ಪರಃ ಸ್ಮೃತಃ |

ಏಕಾಂತಭಕ್ತಿರ್ಗೊವಿಂದೇ ಯತ್ಸರ್ವತ್ರ ತರೀಕ್ಷಣಮ್ ||

ಆದ್ದರಿಂದ, ಎಲೈ ದೈತ್ಯಬಾಲಕರೇ, ಶ್ರೀಹರಿಯು ನಿಮ್ಮನ್ನು ಪೊರೆಯುವನೋ ಇಲ್ಲವೋ ಎಂದು ಸಂದೇಹಿಸಬೇಡಿರಿ. ಸಕಲ ಜೀವರಲ್ಲಿ ಅಂತರ್ಯಾಮಿಯಾಗಿರುವ ಷಡ್ಗುಣೈಶ್ವರ್ಯ ಸಂಪನ್ನನಾದ ಮಹಾಸ್ವಾಮಿಯಾದ ಶ್ರೀಹರಿಯಲ್ಲಿ ನಿಮ್ಮನ್ನು ನೀವು ಪ್ರೀತಿಸುವಂತೆ ಭಕ್ತಿಮಾಡಬೇಕು. ಬೇರೆ ಬೇರೆ ಜಾತಿಗಳಲ್ಲಿ ಹುಟ್ಟಿದರೂ, ಜೀವರು ಪರಮಾತ್ಮನಲ್ಲಿ ಭಕ್ತಿಮಾಡಿ ಶಾಶ್ವತವಾದ ಸುಖಕ್ಕೆ ಭಾಗಿಗಳಾಗಿದ್ದಾರೆ. ಶಿಶುಪಾಲ ಮುಂತಾದ ದೈತ್ಯರು, ನಲಕೂಬರಾದಿ ಯಕ್ಷರು, ಪೂತನಾ ರಾಕ್ಷಸಿ (ಅವಳಲ್ಲಿ ಆವಿಷ್ಟಳಾಗಿದ್ದಊರ್ವಶಿ) ಹಿಡಿಂಬಿ, ಘಟೋತ್ಕಜಾದಿ ರಾಕ್ಷಸರು, ಗೋಪಾಂಗನೆಯರು, ವ್ರಜದ ಗೋಪಾಲಕರು, ಖಾಂಡವದಹನದಲ್ಲಿ ಮೃತವಾದ ಜರಿತರ್ಯಾದಿ ಪಕ್ಷಿಗಳು, ಪಶುಗಳು, ಪಾಪಜೀವರಾದ ನೃಗಾದಿರಾಜರು ಗೋವಿಂದನಲ್ಲಿ ಭಕ್ತಿಮಾಡಿ ಮುಕ್ತರಾಗಿರುವ ವಿಚಾರ ಪುರಾಣಾದಿಗಳಿಂದ ವ್ಯಕ್ತವಾಗುವುದು, ಸರ್ವೋತ್ತಮನೂ, ಜಗಜ್ಜನ್ಮಾದಿ ಕಾರಣನೂ, ಅಚಿಂತ್ಯಾದ್ಭುತ ಮಹಿಮನೂ, ವೇದೈಕವೇದ್ಯನೂ ಆದ ಶ್ರೀಹರಿಪರಮಾತ್ಮನಲ್ಲಿ ಏಕಾಂತಭಕ್ತಿ ಮಾಡುವುದೇ ಪರಮಪುರುಷಾರ್ಥವು

ಆದ್ದರಿಂದ ದೈತ್ಯಬಾಲಕರೇ, ಶ್ರೀಹರಿಯೇ ಸರ್ವೋತ್ತಮನು, ಅವನೇ ಜಗಜ್ಜನ್ಮಾದಿ ಕಾರಣನೆಂದು ವೇದ ಉಪನಿಷತ್ ಮುಂತಾದ ಸಕಲಶಾಸ್ತ್ರಗಳು ಹೊಗಳಿ ಸಾರುತ್ತಿವೆ. ಶ್ರೀಮನ್ನಾರಾಯಣನು ಪುರುಷೋತ್ತಮನು, ಅನಂತಕಲ್ಯಾಣಗುಣ- ಪರಿಪೂರ್ಣ, ನಿರ್ದೋಷ, ಆನಂದಮಯ, ಸರ್ವತ್ರವ್ಯಾಪ್ತ, ಆತನೊಬ್ಬನೇ ಸ್ವತಂತ್ರ ಲಕ್ಷ್ಮೀ ಬ್ರಹ್ಮದೇವರಿಂದಾರಂಭಿಸಿ ಸರ್ವರೂ ಆತನ ದಾಸರು ಮತ್ತು ಶ್ರೀಹರಿಯಿಂದಲೂ, ಪರಸ್ಪರರೂ ಭಿನ್ನರಾದವರು. ಅಂದರೆ ಜೀವೇಶ್ವರರಿಗೆ ಪಾರಮಾರ್ಥಿಕವಾದ ಭೇದವುಂಟು, ಸಂತತವೂ ಎಲ್ಲ ಜೀವರೂ ಶ್ರೀಹರಿಗೆ ಅಧೀನರು. ಸ್ವರೂಪಾನಂದಾವಿರ್ಭಾವರೂಪವಾದ ಆತ್ಯಂತಿಕದುಃಖನಿವೃತ್ತಿಪೂರ್ವಕವಾದ ಮೋಕ್ಷವೇ ಸರ್ವಜೀವರ ಪರಮಗುರಿ. “ಯಸ್ಯ ಪ್ರಸಾದಾತ್ ಪರಮೂರ್ತಿರೂಪಾದಸ್ಮಾತ್ಸಂಸಾರಾತ್ಮುಚ್ಯತೇ ನಾಪರೇಣ | ನಾರಾಯಣೋSಸ್ ಪರಮೋ ವಿಚಿಂತೋ ಮುಮುಕ್ಷುಭಿಃ ಕರ್ಮಪಾಶಾದಮುಷ್ಮಾತ್ ”, “ನಾಹಂ ಮೋಕ್ಷಪ್ರದೋ ವತ್ಸ, ಮೋಕ್ಷದಸ್ತು ಜನಾರ್ದನ” ಇತ್ಯಾದಿ ಶ್ರುತಿಪುರಾಣಾದಿಗಳ ಪ್ರಮಾಣದಂತೆ ಶ್ರೀಹರಿಯ ಪ್ರಸಾದದಿಂದ ಮಾತ್ರ ಮುಕ್ತಿಯು ಲಭ್ಯವಾಗುವುದು. ಶ್ರೀಹರಿಯು ಭಕ್ತಿಯಿಂದ ಮಾತ್ರ ಒಲಿಯುವನು.

ಮಿತ್ರರೇ! ನನ್ನ ತಂದೆಯು ತಾನೇ ಜಗದೀಶನೆಂದೂ, ಶ್ರೇಷ್ಠನೆಂದೂ ಭ್ರಮಿಸಿದ್ದಾನೆ. ಆ ಜ್ಞಾನವು ಮೋಕೋಪಯೋಗಿಯಲ್ಲ, ಅದು ತಮಸ್ಸಿಗೆ ಕಾರಣ. ಅವನಂತೆ ನೀವೂ ಭೂಮಿಷ್ಠರಾಗಬೇಡಿರಿ. ಜಗದೀಶನಾದ, ಸ್ವತಂತ್ರನಾದ, ಪರಾತ್ಪರನಾದ ಶ್ರೀಹರಿಯಿರಲು ದೈತ್ಯನಾದ ನನ್ನ ತಂದೆಯೆಂತು ಸ್ವತಂತ್ರನಾಗಬಲ್ಲನು ? ಶ್ರೀಹರಿಭಕ್ತರಾದ ರುದ್ರಾದಿದೇವತೆಗಳಿಗೂ ಹರಿಯ ವಿಷಯದಲ್ಲಿ ಮೋಹವುಂಟು. ಅಂದಮೇಲೆ ಉಳಿದವರ ಪಾಡೇನು ?

ಶ್ರೀಹರಿಯ ವಿಶೇಷಾನುಗ್ರಹವು ಪರಮಪ್ರಸಾದವು. ಮಹಾಭಾಗವತೋತ್ತಮರೂ, ಜೀವೋತ್ತಮರೂ ಆದ ಶ್ರೀವಾಯುದೇವರಲ್ಲಿರುವುದರಿಂದ ಅಜ್ಞಾನಾದಿ ದೋಷರಹಿತರಾದ ಶ್ರೀವಾಯುದೇವರ ಸನ್ಮತವನ್ನೇ ನಾವು ಆಶ್ರಯಿಸಬೇಕು. ದುರಹಂಕಾರಿಯಾದ ನನ್ನ ತಂದೆಯ ಕುಮತವನ್ನು ತ್ಯಜಿಸಬೇಕು.

ನ ಶ್ರದ್ಧೆಯಂ ಕುಮತಂ ತಸ್ಯ ಚೈವ |

ಸಂಶ್ರಯಂ ವಾಯುಮತಂ ಸದೈವ ||

ಶ್ರೀವಾಯುದೇವರ ಮತವನ್ನು ಆಶ್ರಯಿಸುವುದರಿಂದಲೇ ಉದ್ಧಾರವಾಗುವುದು. ಶ್ರೀಹರಿಯು ಸರ್ವತ್ರವ್ಯಾಪ್ತನಾಗಿದ್ದು ಸತ್ತಾಪ್ರದನಾಗಿರುವನೆಂದು ತಿಳಿಯುವುದರಿಂದ ಆ ಪರಮಾತ್ಮನಲ್ಲಿ ನಿರ್ಮಲವಾದ ಭಕ್ತಿಯುಂಟಾಗುತ್ತದೆ. ಆದ್ದರಿಂದ ನನ್ನ ಪ್ರೀತ್ಯಾಸ್ಪದರಾದ ದೈತ್ಯಬಾಲಕರೇ, ನೀವು ಶ್ರೀಹರಿಯಲ್ಲಿ ಏಕಾಂತ ಭಕ್ತಿಯನ್ನು ಮಾಡಿ ನಿಮ್ಮ ಯೋಗ್ಯತೆಗನುಸರಿಸಿ ಶ್ರೀಹರಿಯ ಅನುಗ್ರಹದಿಂದ ಮೋಕ್ಷವನ್ನು ಪಡೆದು ಉತ್ಕೃತರಾಗಿರಿ,

ಪ್ರಹ್ಲಾದನು ಅತ್ಯಂತ ದರ್ಯಾದ್ರ್ರ ಹೃದಯನಾಗಿ ತನ್ನ ಮಿತ್ರರಾದ ದೈತ್ಯಬಾಲಕರಿಗೆ ಇಂತು ತತ್ವಜ್ಞಾನ ಪರಿಪುತವಾದ ಅಮೋಘ ಉಪದೇಶವನ್ನು ಮಾಡಿದ ಮೇಲೆ ದೈತ್ಯಬಾಲಕರು ಪ್ರಹ್ಲಾದನು ತಮ್ಮ ಕಲ್ಯಾಣಕ್ಕಾಗಿಯೇ ಇಂತಹ ಉಪದೇಶ ಮಾಡಿ ಅನುಗ್ರಹಿಸಿದ್ದಾನೆ ಎಂದು ತಿಳಿದು ಅವನ ಉಪದೇಶದಂತೆಯೇ ವರ್ತಿಸಲು ನಿಶ್ಚಯಿಸಿದರು ಮತ್ತು ಅಂದಿನಿಂದ ಶಂಡಾಮರ್ಕರು ಹೇಳಿದ ಪಾಠಗಳನ್ನು ಕಡೆಗಣಿಸಿದರು. ಪ್ರಹ್ಲಾದನ ಶಿಷ್ಯರಾಗಿ ನೀತಿಶಾಸ್ತ್ರವನ್ನು ತಿರಸ್ಕರಿಸಿ ಹಂಭಕ್ತರಾಗಿ ಶ್ರೀಪರಮಾತ್ಮನಲ್ಲಿ ನಿರ್ಮಲ ಭಕ್ತಿಮಾಡುತ್ತಾ ಮೋಕ್ಷಮಾರ್ಗಾವಲಂಬಿಗಳಾದರು.

ಮನೆಯಿಂದ ಬಂದ ಶಂಡಾಮರ್ಕರು ಈ ಎಲ್ಲ ವಿಪರೀತಗಳನ್ನು ಕಂಡು ಭಯಗೊಂಡು ಇದನ್ನು ಹೀಗೆಯೇ ಬಿಟ್ಟರೆ ಅನರ್ಥವಾಗುವುದೆಂದು ಭಾವಿಸಿ ಈ ಎಲ್ಲ ವಿಚಾರಗಳನ್ನೂ ದೈತ್ಯಸಾಮ್ರಾಟನಿಗೆ ತಿಳಿಸಲು ಅರಮನೆಗೆ ಧಾವಿಸಿದರು.