Narada's Instigation

|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ - ಕಲ್ಪತರು

ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು

ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು

2. ನಾರದರ ಪ್ರಚೋದನೆ

ಜ್ಞಾನ-ಭಕ್ತಿ-ವೈರಾಗ್ಯಸಂಪನ್ನರೂ, ತಪೋಧನರೂ, ಶ್ರೀಹರಿಯ ಪರಮಭಕ್ತರೂ ಆದ ಶ್ರೀನಾರದ ಮಹರ್ಷಿಗಳಿಗೆ ದೈತ್ಯರಾಜ ಹಿರಣ್ಯಕಶ್ಯಪನ ಈ ದಾಂಧಲೆಯನ್ನು ಕಂಡು ಮನಸ್ಸಿಗೆ ಅಪಾರ ವ್ಯಥೆಯಾಯಿತು. ದೇವತೆಗಳಿಗೆ ಬರಲಿರುವ ಕಷ್ಟ ಋಷಿಮುನಿಗಳು, ಗೋಬ್ರಾಹ್ಮಣರು, ಧರ್ಮ, ಸ್ವಾಧ್ಯಾಯ, ಯಜ್ಞಯಾಗಾದಿ, ಸತ್ಕಾರ್ಯಗಳಿಗೆ ಬಂದೊದಗಿದ ವಿಪತ್ತುಗಳನ್ನು ಊಹಿಸಿ ಕರುಣಾಮೂರ್ತಿಗಳಾದ ಆ ಮಹನೀಯರ ಹೃದಯದಲ್ಲಿ ಕಾರುಣ್ಯತರಂಗಿಣಿಯು ಪುಟಿದೆದ್ದಿತು. ಆಗ ನಾರದರು ಮನದಲ್ಲೇ ಚಿಂತಿಸಿದರು - “ದೈತ್ಯನ ಉಪಟಳ ನಿಲ್ಲಬೇಕಾದರೆ ಅವನ ಮೇಲೆ ಭಗವಂತನ ದೃಷ್ಟಿ ಬೀಳುವಂತೆ ಮಾಡಬೇಕು. ಅದಕ್ಕೆ ಹಿರಣ್ಯಕಶ್ಯಪನು ಮದಿಸಿ, ಅವನ ಹಿಂಸಾಚಾರ ಮೇರೆ ಮೀರುವಂತಾಗಬೇಕು. ಭಗವನ್, ಶ್ರೀಹರಿ! ನಿನ್ನ ಪ್ರೇರಣೆಯಂತೆ ಲೋಕಕಲ್ಯಾಣಕ್ಕಾಗಿ ಈ ದೈತ್ಯನನ್ನು ಪ್ರಚೋದಿಸಲು ಉದ್ಯುಕ್ತನಾಗಿದ್ದೇನೆ. ದಯಾಘನ! ಸಜ್ಜನರ ಉದ್ಧಾರಕ್ಕಾಗಿ ಪ್ರಯತ್ನಿಸುವ ನನ್ನೀ ಪ್ರಯತ್ನಕ್ಕೆ ಯಶಸ್ಸನ್ನು ಕರುಣಿಸು” ಎಂದು ಪರಮಾತ್ಮನನ್ನು ಪ್ರಾರ್ಥಿಸಿ ದೈತ್ಯರಾಜನ ಅರಮನೆಗೆ ಆಗಮಿಸಿದರು.

ನಾರದ ಮಹರ್ಷಿಗಳನ್ನು ಕಂಡು ದೈತ್ಯೇಂದ್ರನು ನಮಸ್ಕರಿಸಿ ಸತ್ಕರಿಸಿದನು. ಕುಶಲಪ್ರಶ್ನೆಯಾದ ಮೇಲೆ ನಾರದರು ವಿವಿಧ ರೀತಿಯಿಂದ ಅವನನ್ನು ಕೆರಳಿಸಿ ಬ್ರಹ್ಮದೇವರಲ್ಲಿ ಅವಧ್ಯತ್ವವರವನ್ನು ಪಡೆಯುವಂತೆ ಪ್ರಚೋದಿಸಿ ತೆರಳಿದರು. ಹಿರಣ್ಯಕಶ್ಯಪನು ಪಿತಾಮಹ ಬ್ರಹ್ಮದೇವರನ್ನು ಕುರಿತು ತಪಸ್ಸು ಮಾಡಿ ಅವರಿಂದ ಸಕಲ ಲೋಕಪಾಲಕರ ಅಧಿಪತ್ಯವನ್ನೂ, ಅಮರತ್ವವನ್ನೂ ಪಡೆಯಲು ಕಾತರಿಸಿ, ಆ ವಿಚಾರವನ್ನು ಪತ್ನಿಗೆ ಅರುಹಿ ಅವಳಿಂದ ಬೀಳ್ಕೊಳ್ಳಲು ದೈತ್ಯಸಾಮ್ರಾಜ್ಞೆಯ ಅಂತಃಪುರಕ್ಕೆ ತೆರಳಿದನು.

ಪತಿಯ ಆಗಮನದಿಂದ ಹರ್ಷಿತಳಾದ ಕಯಾಧದೇವಿ ಹಿರಣ್ಯಕಶ್ಯಪುವನ್ನು ಸ್ವಾಗತಿಸಿ, ಭಕ್ತಿಗೌರವದಿಂದ ಉಪಚರಿಸಿದಳು. ಹಿರಣ್ಯಕಶ್ಯಪನು ನಾರದರ ಉಪದೇಶ, ತನ್ನ ನಿಶ್ಚಯಗಳನ್ನು ಕಯಾಧುವಿಗೆ ತಿಳಿಸಿ ತಪಸ್ಸಿಗೆ ತನ್ನನ್ನು ಸಂತೋಷದಿಂದ

ಕಳುಹಿಸಬೇಕೆಂದು ಹೇಳಿದನು.

ಕಯಾಧುವಿಗೆ ಪತಿಯ ವಾಕ್ಯವನ್ನಾಲಿಸಿ ಹರುಷವಾದರೂ ಪತಿಯ ವಿರಹವನ್ನು ಸಹಿಸಲಾಗದೆ, “ಪ್ರಾಣನಾಥ! ನೀವು ನೆರವೇರಿಸಲಿರುವ ಈ ತಪಸ್ಸು, ಎಷ್ಟು ವರ್ಷವಾಗುವುದು ?” ಎಂದೆನಲು ಹಿರಣ್ಯಕಶ್ಯಪನು “ದೇವಿ! ಈ ತಪಸ್ಸು ಸುಮಾರು ಹತ್ತು ಸಹಸ್ರ ವರ್ಷಗಳ ಕಾಲ ನೆರವೇರುವುದು” ಎಂದನು.

ಆಗ ಕಯಾದುವು “ಸ್ವಾಮಿ, ಹತ್ತು ಸಹಸ್ರ ವರ್ಷಗಳಷ್ಟು ದೀರ್ಘಕಾಲ ನೀವು ಹಸಿವು-ತೃಷೆಗಳನ್ನೂ, ಕಾಯಕೇಶಾದಿಗಳನ್ನೂ ಸಹಿಸಬಲ್ಲಿರಾ ? ಮೇಲಾಗಿ ಒಂದು ಕ್ಷಣವೂ ನನ್ನನ್ನು ಅಗಲಿರಲಾರದ ನೀವು ಹತ್ತು ಸಾವಿರ ವರ್ಷಗಳು ನನ್ನನ್ನು ಬಿಟ್ಟಿರಬಲ್ಲಿರಾ?” ಎಂದು ನಸುನಕ್ಕಳು.

ಹಿರಣ್ಯಕಶ್ಯಪನು “ಪ್ರಿಯೆ, ನಿನ್ನ ಮನದಿಂಗಿತವನ್ನರಿತೆನು. ನನ್ನ ವಿರಹವನ್ನು ಸಹಿಸಲಾಗದ ನೀನು ಹೀಗೆ ಹೇಳುತ್ತಿರುವೆ. ಕೇಳು, ದೇವಿ, ದೈತ್ಯರ ಅಭ್ಯುದಯ - ಕ್ಷೇಮಗಳಿಗಾಗಿ ನಾನು ಎಷ್ಟೇ ಕಷ್ಟಗಳು ಬಂದೊದಗಿದರೂ ಎಲ್ಲವನ್ನೂ ಸಹಿಸುವೆನು. ನೀನು ಮಾತ್ರ ನನ್ನನ್ನು ಸಂತೋಷದಿಂದ ಕಳುಹಿಸಿಕೊಡಬೇಕು ಕಂಡೆಯಾ?” ಎಂದು ಹೇಳಿದನು.

ಪತಿಯ ವಿರಹವನ್ನು ದೀರ್ಘಕಾಲ ಸಹಿಸಬೇಕಾಗುವುದೆಂದು ಚಿಂತೆಯಾದರೂ ಸಾಧೀಮಣಿಯಾದ ಕಯಾದುವು ದೈತ್ಯರಾಜ್ಯದ ಹಿತ, ಪತಿಯ ಅಭ್ಯುದಯಗಳಿಗಾಗಿ ತನ್ನ ಸಂಕಟವನ್ನು ಸಂತೋಷದಿಂದ ಅನುಭವಿಸಲು ಸಿದ್ಧಳಾಗಿ ದಾಸಿಯರಿಂದ ಆರತಿಯನ್ನು ತರಿಸಿ ಪತಿಗೆ ತಿಲಕವನ್ನು ಹಚ್ಚಿ, ಆರತಿಯನ್ನು ಬೆಳಗಿ, ನಮಸ್ಕರಿಸಿ ಶುಭಕೋರಿ ಸಂತೋಷದಿಂದ ಹಿರಣ್ಯಕಶ್ಯಪನನ್ನು ತಪಸ್ಸಿಗೆ ಕಳುಹಿಸಿಕೊಟ್ಟಳು. ಹಿರಣ್ಯಕಶ್ಯಪನು ಪತ್ನಿಯಿಂದ ಬೀಳ್ಕೊಂಡು ತಪಸ್ಸಿಗಾಗಿ ಮಂದರಪರ್ವತಕ್ಕೆ ಪ್ರಯಾಣ ಬೆಳೆಸಿದನು.